ಜೂನ್ 27ರಂದು ಎಲ್ಲಾ ತಾಲೂಕುಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೆಂಪೇಗೌಡ ಜಯಂತಿ ಆಚರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಎಲ್ಲಾ ಕ್ಷೇತ್ರದ 198 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ಜೂನ್ 27ರಂದು ಎಲ್ಲಾ ತಾಲೂಕುಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೆಂಪೇಗೌಡ ಜಯಂತಿ ಆಚರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಭೆ ಮಾಡಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಚರಣೆಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
198 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ
ಕೆಂಪೇಗೌಡ ಪ್ರಾಧಿಕಾರದಿಂದ ನಡೆಯುವ ಕಾರ್ಯಕ್ರಮಕ್ಕೆ ಕಂದಾಯ ಇಲಾಖೆ ಸಹಭಾಗಿತ್ವ ಇರಲಿದೆ. ಬಿಬಿಎಂಪಿ ವಾರ್ಡ್ ಮಟ್ಟದಲ್ಲೂ ಹಿಂದೆ ಜಯಂತಿ ಆಚರಣೆ ನಡೆಯುತ್ತಿತ್ತು. ಎಲ್ಲಾ ಕ್ಷೇತ್ರದ 198 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ನಿರ್ಧಾರ ಮಾಡಿದ್ದು, ಬಿ.ಎಲ್.ಶಂಕರ್ ನೇತೃತ್ವದಲ್ಲಿ ಅರ್ಹ ವ್ಯಕ್ತಿಗಳ ಆಯ್ಕೆ ಮಾಡಲಾಗಿದೆ. ಹಾಸನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು
- ಕೆಂಪೇಗೌಡ ಜಯಂತಿ ಕಾರ್ಯಕ್ರಮ ಯಾವುದೇ ಜಾತಿ ಧರ್ಮ ಮತ್ತು ಭಾಷೆಗೆ ಸೀಮಿತ ಅಲ್ಲ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಡೆಯಿಂದ ಜೂನ್ 27 ರಂದು ರಾಜ್ಯದ ಎಲ್ಲ ತಾಲೂಕಿನಲ್ಲೂ ರಾಜ್ಯ ಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಕಡ್ಡಾಯ ಆಚರಣೆಗೆ ಸೂಚನೆ.
- ಮಾಗಡಿ ಯಲಹಂಕ, ಕೆಂಪಾಂಬುದಿ ಕೆರೆ ಲಾಲ್ ಬಾಗ್ ಸೇರಿದಂತೆ ನಗರದ 5 ಕಡೆಗಳಿಂದ ಜ್ಯೋತಿ ಹಿಡಿದು ವಿಧಾನಸೌಧಕ್ಕೆ ಜಾತ್ರಾ ಮೆರವಣಿಗೆ.
- ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ಮೆರವಣಿಗೆಯನ್ನು ಸಚಿವರಿಂದ ಉದ್ಘಾಟನೆ.
- 12 ಗಂಟೆಗೆ ವಿಧಾನಸೌಧದ ಎದುರಿರುವ ಕೆಂಪೇಗೌಡ ಪ್ರತಿಮೆಯ ಬಳಿ ಮೆರವಣಿಗೆ ಆಗಮನ.
- ಮಧ್ಯಾಹ್ನ 12 ಗಂಟೆಯ ನಂತರ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ
- ಬಿಎಲ್ ಶಂಕರ್ ನೇತೃತ್ವದಲ್ಲಿ ಸಾಧಕರ ಆಯ್ಕೆ ಮಾಡಿದ್ದು, ಮೂರು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವ.
- ಬೆಂಗಳೂರು ನಗರದಲ್ಲಿ 28 ರಿಂದ 5ರ ವರೆಗೆ ಶಾಸಕರ ಅನುಕೂಲಕ್ಕೆ ತಕ್ಕಂತೆ ಎಲ್ಲ ಬೆಂಗಳೂರಿನ ಎಲ್ಲ ಕ್ಷೇತ್ರದಲ್ಲೂ ಕಾರ್ಯಕ್ರಮ ಕಡ್ಡಾಯ ಆಚರಿಸಬೇಕು.
- ಜುಲೈ 9ರಂದು ಬಿವಿಎಂಪಿ ವತಿಯಿಂದ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
- ಬಿಬಿಎಂಪಿ ವಾರ್ಡ್ ಮಟ್ಟದ ಪ್ರಶಸ್ತಿಗೆ 198 ಜನ ಸಾಧಕರನ್ನು ಆಯ್ಕೆ
- ಎಲ್ಲ ಜಾತಿ ಧರ್ಮಗಳ ಸಾಧಕರಿಗೂ ಪ್ರಶಸ್ತಿ ನೀಡುವ ಉದ್ದೇಶ
- ಕ್ರೀಡೆ ಸಾಹಿತಿ ಸಮಾಜಸೇವೆ ಮಾನದಂಡದ ಅಡಿಯಲ್ಲಿ ಸಾಧಕರ ಆಯ್ಕೆ
- ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಸನದಲ್ಲೂ ಪ್ರತ್ಯೇಕ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಹಾಗೆ ಮುಂದುವರೆಯಲಿದೆ.
ಪುಕ್ಸಟೆಯಾಗಿ ಯಾರ ಬಳಿಯೂ ನಾವು ಅಕ್ಕಿ ಕೇಳುತ್ತಿಲ್ಲ
ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪುಕ್ಸಟೆಯಾಗಿ ಯಾರ ಬಳಿಯೂ ನಾವು ಅಕ್ಕಿ ಕೇಳುತ್ತಿಲ್ಲ. ಬೇರೆ ರಾಜ್ಯದಿಂದ ಅಕ್ಕಿ ಖರೀದಿಸುವ ಬಗ್ಗೆ ಮಾತುಕತೆ ನಡೆದಿದೆ. ನಿಮ್ಮ ಪಕ್ಷಕ್ಕಿಂತ ನಮ್ಮ ಪಕ್ಷ ವಿಭಿನ್ನವಾಗಿದೆ ಎಂದು ಹೇಳಿದರು.
ರಾಜ್ಯದ ಜನರಿಗೆ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಸಿಎಂ ಸಿದ್ಧರಾಮಯ್ಯ ಸಚಿವರು ದೆಹಲಿಯಲ್ಲಿ ಯಾರನ್ನು ಭೇಟಿಯಾದ್ರೋ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ, ಹೋಗುವ ಟೈಂ ಬರುತ್ತದೆ ಹೋಗುತ್ತೇನೆ ಎಂದರು.
ಕುಮಾರಸ್ವಾಮಿ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಟಾಂಗ್
ಬಿಜೆಪಿಯವರು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ. ನಮಗೆ ಬಡವರ ಬಗ್ಗೆ ಕಾಳಜಿ ಇದೆ. ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ಸಿಗರಿಗೆ ಜ್ಞಾನ ಇರಲಿಲ್ವಾ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನಿಡಿದ್ದು, ನಮಗೆ ಖಂಡಿತಾ ಜ್ಞಾನ ಇರಲಿಲ್ಲ, ಕುಮಾರಣ್ಣಗೆ ಜ್ಞಾನ ಇತ್ತಲ್ಲ ಸಾಕು ಎಂದು ಕಿಡಿಕಾರಿದ್ದಾರೆ.
ಶೋಭಾ ಕರಂದ್ಲಾಜೆಯವರು ಮೊದಲು ಇದರ ಬಗ್ಗೆ ಮಾತಾಡಲಿ
ಗ್ಯಾರಂಟಿ ಘೋಷಣೆಗೂ ಮುನ್ನ ಮೆದುಳು ಇರಲಿಲ್ವಾ ಎಂಬ ಕೇಂದ್ರ ಸಚಿವೆ ಶೋಭಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಹಿಂದೆ ಮೋದಿ ಎಲ್ಲರ ಖಾತೆಗೆ 15 ಲಕ್ಷ ರೂ. ಹಣ ಹಾಕುತ್ತೇವೆ ಎಂದಿದ್ದರು. ಬಿಜೆಪಿ ಹಿಂದೆ ಸಾಕಷ್ಟು ಭರವಸೆ ನೀಡಿತ್ತು, ಭರವಸೆ ಈಡೇರಿಸಿದೆಯಾ ಎಂದು ಪ್ರಶ್ನಿಸಿದರು. ಶೋಭಾ ಕರಂದ್ಲಾಜೆಯವರು ಮೊದಲು ಇದರ ಬಗ್ಗೆ ಮಾತಾಡಲಿ ಎಂದರು.