ಅಹಮದಾಬಾದ್: ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ದಲಿತ ಸಮುದಾಯಕ್ಕೆ ಸೇರಿದ ಬಾಲಕನೋರ್ವ ಚೆಂಡು ಮುಟ್ಟಿದ್ದಕ್ಕೆ ಆತನ ಸೋದರಮಾವನ ಹೆಬ್ಬೆರಳನ್ನು ಕತ್ತಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಘಟನೆಯೂ ಗುಜರಾತಿನ ಪಟಾಣ್ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ನಡೆದಿದ್ದು ಘಟನೆ ಸಂಬಂಧ ಏಳು ಮಂದಿ ವಿರುದ್ಧ FIR ದಾಖಲಿಸಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.
ಪ್ರಕರಣದ ಹಿನ್ನಲೆ?
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಕಾಕೋಶಿ ಗ್ರಾಮದ ಶಾಲಾ ಆಟದ ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದ ವೇಳೆ ತನ್ನತ್ತ ಬಂದ ಚೆಂಡನ್ನು ದಲಿತ ಸಮುದಾಯದ ಬಾಲಕ ಎತ್ತಿಕೊಂಡಿದ್ದಕ್ಕೆ ಕೋಪಗೊಂಡು ಬೆದರಿಕೆ ಹಾಕಿ ಆತನ ಜಾತಿಯನ್ನು ನಿಂದಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಬಾಲಕನ ಸೋದರ ಮಾವ ಧೀರಜ್ ಪರ್ಮಾರ್ ಯುವಕರ ಗುಂಪಿಗೆ ಹಾಗೆ ಮಾತನಾಡದಂತೆ ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕಳುಹಿಸಿದ್ದಾರೆ. ಅದೇ ದಿನ ಸಂಜೆ ಏಳು ಜನರ ಗುಂಪು ಬಾಲಕನ ಸೋದರಮಾವ ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನ ಹೆಬ್ಬೆರಳನ್ನು ಕತ್ತರಿಸಿ ಪರಾರಿಯಾಗಿದ್ಧಾರೆ.
ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ(IPC Section) 326(ಮಾರಕಾಸ್ತ್ರಗಳಿಂದ ಹಲ್ಲೆ), 506(ಬೆದರಿಕೆ), ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಏಳು ಆರೋಪಿಗಳು ಘಟನೆ ನಂತರ ತಲೆಮಾರಿಸಿಕೊಂಡಿದ್ದು ಅವರ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.