Dhawan will meet his son after 3 years: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರು ಮೂರು ವರ್ಷಗಳ ಬಳಿಕ ತಮ್ಮ ಪುತ್ರ ಜೊರಾವರ್‌ ಅವರನ್ನು ಭೇಟಿಯಾಗಲಿದ್ದಾರೆ. 2021ರಲ್ಲಿ ಶಿಖರ್‌ ಧವನ್‌ ಅವರು ತಮ್ಮ ಪತ್ನಿ ಆಯೆಶಾ ಮುಖರ್ಜಿಗೆ ವಿಚ್ಛೇದನ ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಧವನ್‌ ಅವರು ತಮ್ಮ ಪುತ್ರನನ್ನು ನೋಡಲು ಸಾಧ್ಯವಾಗಿರಲಿಲ್ಲ. ಶಿಖರ್‌ ಧವನ್ ಅವರ ಕುಟುಂಬದ ಕಾರ್ಯಕ್ರಮದ ನಿಮಿತ್ತ ತಮ್ಮ ಪುತ್ರನನ್ನು ಭಾರತಕ್ಕೆ ತರೆ ತರಬೇಕೆಂದು ಧವನ್‌ ಅವರ ವಿಚ್ಛೇದಿತ ಪತ್ನಿ ಆಯೆಶಾಗೆ ದಿಲ್ಲಿಯ ಕೌಂಟುಂಬಿಕ ನ್ಯಾಯಾಲಯ ಆದೇಶಿಸಿದೆ.

Shikhar Dhawan-Aesha Mukherji

ಹೈಲೈಟ್ಸ್‌:

  • ತಮ್ಮ ಪುತ್ರನನ್ನು ಭಾರತಕ್ಕೆ ಕರೆತರುವಂತೆ ಧವನ್‌ ಅವರ ವಿಚ್ಛೇದಿತ ಪತ್ನಿಗೆ ದಿಲ್ಲಿ ಕೌಟುಂಬಿಕ ನ್ಯಾಯಾಲಯ ಆದೇಶ.
  • 2020ರಲ್ಲಿ ಕ್ರಿಕೆಟರ್‌ ಶಿಖರ್‌ ಧವನ್‌ ಅವರು ಕೊನೆಯ ಬಾರಿ ತಮ್ಮ ಪುತ್ರ ಜೊರಾವರ್‌ ಅವರನ್ನು ನೋಡಿದ್ದರು.
  • ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಭಾರತಕ್ಕೆ ಪುತ್ರನನ್ನು ಕರೆತರಬೇಕೆಂದು ನ್ಯಾಯಾಲಯ ಆಯೆಶಾಗೆ ಸೂಚನೆ ನೀಡಿದೆ.

ಹೊಸದಿಲ್ಲಿ: ಟೀಮ್‌ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಮೂರು ವರ್ಷಗಳ ಬಳಿಕ ತಮ್ಮ ಪುತ್ರ ಜೊರಾವರ್ ಅವರನ್ನು ಭೇಟಿಯಾಗಲಿದ್ದಾರೆ. ತಮ್ಮ 9 ವರ್ಷದ ಮಗನನ್ನು ಕೌಟುಂಬಿಕ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಕರೆತರುವಂತೆ ಶಿಖರ್‌ ಧವನ್ ಅವರ ವಿಚ್ಛೇದಿತ ಪತ್ನಿ ಆಯೆಶಾ ಮುಖರ್ಜಿಗೆ ದಿಲ್ಲಿಯ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.

ವಿಚ್ಛೇದನ ಮತ್ತು ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಈ ಇಬ್ಬರೂ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಪುತ್ರನ ಮೇಲೆ ತಾಯಿಗೆ ಮಾತ್ರ ವಿಶೇಷ ಹಕ್ಕು ಇಲ್ಲ ಎಂದು ದಿಲ್ಲಿ ಕೌಟುಂಬಿಕ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಮಗನನ್ನು ಭಾರತಕ್ಕೆ ಕರೆತರಲು ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಪಾಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಮೂರ್ತಿ ಹರೀಶ್ ಕುಮಾರ್ ಅವರು, ಆಯೇಷಾ ಮುಖರ್ಜಿ ಅವರಿಗೆ ಛೀಮಾರಿ ಹಾಕಿದ್ದಾರೆ. 2020ರ ಆಗಸ್ಟ್ ತಿಂಗಳಿನಿಂದ ತಮ್ಮ ಮಗುವನ್ನು ನೋಡಿಲ್ಲ ಎಂದು ಶಿಖರ್‌ ಧವನ್ ಅವರ ಕುಟುಂಬ ನ್ಯಾಯಾಲಯಕ್ಕೆ ತಿಳಿಸಿತ್ತು.

ಪುತ್ರನನ್ನು ಭೇಟಿಯಾಗಲು ಮೊದಲಿಗೆ ಜೂನ್ 17 ರಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಮಗನ ಶಾಲಾ ರಜೆ ಮತ್ತು ವೇಳಾಪಟ್ಟಿಯನ್ನು ಪರಿಗಣಿಸಿ ಜುಲೈ 1ಕ್ಕೆ ಇದನ್ನು ಮುಂದೂಡಲಾಯಿತು. ಹೊಸ ದಿನಾಂಕದ ಬಗ್ಗೆ ಕುಟುಂಬ ಸದಸ್ಯರು ಸಂಪರ್ಕಿಸದ ಕಾರಣ ಇದು ಯಶಸ್ವಿಯಾಗುವುದಿಲ್ಲ ಎಂದು ಮುಖರ್ಜಿ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದನ್ನು ನ್ಯಾಯಾಲಯ ನಿರಾಕರಿಸಿದೆ.

“2020 ರಿಂದಲೂ ಮಗುವನ್ನು ಭೇಟಿಯಾಗಲು ಅರ್ಜಿದಾರ ಮತ್ತು ಅವರ ಕುಟಂಬದ ಸದಸ್ಯರಿಗೆ ಸಾಧ್ಯವಾಗಿಲ್ಲ. ಅರ್ಜಿದಾರ ಶಿಖರ್ ಧವನ್ ಅವರ ಪುತ್ರ ತಮ್ಮ ಅಜ್ಜಿಯನ್ನು ಭೇಟಿಯಾಗಬೇಕೆಂಬ ಬಯಕೆಯನ್ನು ಅಸಮಂಜಸವೆಂದು ಕರೆಯಲಾಗುವುದಿಲ್ಲ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಮಗು ತನ್ನ ಅಜ್ಜಿಯನ್ನು ಭೇಟಿಯಾಗಬೇಕೆಂಬ ಧವನ್ ಅವರ ಆಸೆಯನ್ನು ನ್ಯಾಯಾಧೀಶರು ಎತ್ತಿ ಹಿಡಿದರು. ಭಾರತದಲ್ಲಿರುವ ಧವನ್ ಅವರ ಮನೆ ಮತ್ತು ಸಂಬಂಧಿಕರು ತಮ್ಮ ಪುತ್ರನಿಗೆ ಪರಿಚಯವಿಲ್ಲ ಎಂದು ವಿಚ್ಛೇದಿತ ಪತ್ನಿ ಮುಖರ್ಜಿ ಹೇಳಿದ್ದರು. ಆದರೆ, ಇದನ್ನು ನ್ಯಾಯಾಧೀಶರು ಅಲ್ಲಗೆಳೆದರು. ಶಾಲೆಯ ರಜೆ ದಿನಗಳಲ್ಲಿ ತಮ್ಮ ಮಗನನ್ನು ಶಿಖರ್ ಧವನ್‌ ಸ್ವಲ್ಪ ದಿನಗಳ ಕಾಲ ಭಾರತಕ್ಕೆ ಕರೆದೊಯ್ಯಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ.

Leave a Reply

Your email address will not be published. Required fields are marked *