ಬಂಗಾರ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆಯ ಮುಖದಲ್ಲಿ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮಂದಹಾಸ ಮೂಡಿಸಿದೆ.
ಹೌದು, ಪ್ರಯಾಣಿಕರು ಬಿಟ್ಟು ಹೋಗಿದ್ದ ಚಿನ್ನಾಭರಣಗಳನ್ನ ವಾಪಸ್ ಮಾಲಿಕರಿಗೆ ಹಿಂದಿರುಗಿಸಿದ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ನಡೆದಿದೆ.
ಬೆಂಗಳೂರಿನ ಆಂಜಿನಪ್ಪ ಲೇಔಟ್ ನಿವಾಸಿ ಪ್ರಮೀಳಾ ಎಂಬಾಕೆ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು ಮೂರು ಲಕ್ಷ ರೂ ಬೆಲೆ ಬಾಳುವ ಚಿನ್ನದ ಒಡವೆಗಳ ಬಾಕ್ಸ್ ಇದ್ದ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಬಿಟ್ಟು ಹೋಗಿದ್ದರಂತೆ.
ಇದನ್ನು ಗಮನಿಸಿದ ಬಸ್ ಕಂಡಕ್ಟರ್ ಸಿ ವಿ ರಮೇಶ್ ಗೌರಿಬಿದನೂರು ಘಟಕದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪ್ರಾಮಾಣಿಕತೆ ಮೆರೆದಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಘಟಕದ ವ್ಯವಸ್ಥಾಪಕ ಶಿವಪ್ಪ ಆಭರಣ ಕಳೆದುಕೊಂಡ ಮಹಿಳೆಯನ್ನು ಗೌರಿಬಿದನೂರು ಬಸ್ ಘಟಕಕ್ಕೆ ಕರೆಸಿ ನಿರ್ವಾಹಕ ಸಿ ವಿ ರಮೇಶ್ ಹಾಗೂ ಭದ್ರತಾ ಹವಾಲ್ದಾರ್ ಶ್ರೀನಿವಾಸ್ ಸಮ್ಮುಖದಲ್ಲಿ ಚಿನ್ನಾಭರಣಗಳನ್ನು ಹಸ್ತಾಂತರಿಸಿದ್ದಾರೆ.
ಗೌರಿಬಿದನೂರು ಘಟಕದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಸಿ ವಿ ರಮೇಶ್ ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.