ಬಿಜೆಪಿ ಅಂದ್ರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ: ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಬೇಡ ಎಂದು ಮತದಾರರೇ ನಿರ್ಧಾರ ಮಾಡಿದ್ದಾರೆ, ಭಾರತೀಯ ಜನತಾ ಪಕ್ಷ ಎಂದರೆ ಬಿಜಿನೆಸ್ ಹಾಗೂ ಬ್ರಿಟಿಷ್ ಜನತಾ ಪಾರ್ಟಿ ಎಂದು ಟೀಕಿಸಿದ್ದಾರೆ.ಬಿಜೆಪಿ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ
ಶಿವಮೊಗ್ಗ : ಬಿಜೆಪಿ ಪಕ್ಷ ಅಂದ್ರೆ ಬಿಜಿನೆಸ್ ಜನತಾ ಪಾರ್ಟಿ ಹಾಗೂ ಬ್ರಿಟಿಷ್ ಜನತಾ ಪಾರ್ಟಿ.
ಇದನ್ನೇ ಜನ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲಿಯಿರಿ, ಮೊದಲು ಭಾಷಣ ಮಾಡುವುದನ್ನು ಬಿಡಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ” 65 ಸ್ಥಾನ ಇರುವುದು 165 ಆಗುತ್ತಾ?, ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರೆ. ಇವರು ಜೀವಮಾನದಲ್ಲಿ ಯಾವತ್ತಾದರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಕೆಲಸ ಮಾಡಿದ್ದಾರಾ? ಇಂತಹ ಬಿಜೆಪಿ ಸರ್ಕಾರ ಬೇಡ ಎಂದು ಜನರೇ ನಿರ್ಧಾರ ಮಾಡಿದ್ದಾರೆ” ಎಂದರು.
“ನಮ್ಮ ಪಕ್ಷದ ಪ್ರಾಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಯಾವುದೇ ಇಲಾಖೆಯಲ್ಲಿ ಹಗರಣ ಆಗಿದ್ದರೂ ತನಿಖೆ ನಡೆಸುತ್ತೇವೆ ಎಂದು. ಸರ್ಕಾರದ ಹಣ ಜನರಿಗೆ ಸೇರಬೇಕು. ಅಲ್ಲಿ ತಪ್ಪಾಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಕರ ನೇಮಕಾತಿ ಹಗರಣದ ಕುರಿತು ಸಹ ತನಿಖೆ ನಡೆಯುತ್ತಿದೆ. ಈ ಕುರಿತು ನಾನು ಮಾತನಾಡುವುದಿಲ್ಲ, ನನಗೆ ಮಾಡಲು ಬೇರೆಯದ್ದೇ ಕೆಲಸಗಳಿವೆ” ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರದ ಕುರಿತು ಮಾತನಾಡಿ, ನಾವು ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಅದನ್ನು ಬಿಜೆಪಿಯವರು ಒಮ್ಮೆ ಓದಲಿ. ಮತಾಂತರ ಮಾಡ್ತಾರೆ ಎಂದು ಇವರು ಭಾಷಣ ಹೊಡೆದಿದ್ದರಲ್ಲವೇ, ಅದೇ ಜನರೆ ನಮಗೆ ಮತ ಹಾಕಿ ಗೆಲ್ಲಿಸಿದ್ದು. ಮೊದಲು ಪ್ರಣಾಳಿಕೆ ಓದಲಿ, ನಂತರ ನಾನು ಉತ್ತರ ಕೊಡ್ತೇನೆ ಎಂದ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ 25 ಜನ ಸಂಸದರು ಯಾವತ್ತಾದರೂ ಹೋಗಿ ನಮ್ಮ ಜಿಎಸ್ಟಿ ಪಾಲು ಕೋಡಿ ಎಂದು ಕೇಳಿದ್ದಾರಾ?, ಎಂದಾದರು ಮೋದಿ ಮನೆ ಬಳಿ ಹೋಗಿ ಪ್ರತಿಭಟನೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮಧು ಬಂಗಾರಪ್ಪ : ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮಧು ಬಂಗಾರಪ್ಪ ಬಳಿಕ ಸಮಸ್ಯೆ ಗಳನ್ನು ಈಡೇರಿಸುವ ಭರವಸೆ ನೀಡಿದರು. ನಂತರ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ನವರ ಆಶೀರ್ವಾದ ಪಡೆದರು.