ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋತವರಿಂದ ಭುಗಿಲೆದ್ದ ಆಕ್ರೋಶ.. ಸಭೆಯಲ್ಲಿ ಏನೆಲ್ಲಾ ಆಯ್ತು..?
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಕಳಪೆ ಪ್ರದರ್ಶನ ನೀಡಿ ಸೋತು ಸುಣ್ಣವಾದ ಕೇಸರಿ ಪಾಳಯ, ಆ ಆಘಾತದಿಂದ ಇನ್ನೂ ಹೊರಬಂದಿಲ್ಲ. ವಿಪಕ್ಷ ನಾಯಕನ ಆಯ್ಕೆಯೂ ಆಗಿಲ್ಲ. ಫಲಿತಾಂಶ ಬಂದು ತಿಂಗಳಾದ ಬಳಿಕ ಗೆದ್ದು-ಸೋತವರ ಜೊತೆ ಹಿರಿಯ ನಾಯಕರು ಆತ್ಮಾವಲೋಕನ ನಡೆಸಿದ್ದಾರೆ. ಎಲ್ಲಿ ತಪ್ಪಾಯ್ತು ಅಂತ ಚರ್ಚೆ ನಡೆಸಿದಾಗ ಹೊರಬಂದಿದ್ದು ಕೇವಲ ಪರಾಜಿತ ಅಭ್ಯರ್ಥಿಗಳ ಅಸಮಾಧಾನ.
ಕೇಸರಿ ಕಲಿಗಳ ಸೋಲು ಗೆಲುವಿನ ಆತ್ಮಾವಲೋಕನ
ಚುನಾವಣೆ ಮುಗಿದು ತಿಂಗಳಾಗಿದ್ರೂ ಬಿಜೆಪಿ ನಾಯಕರು ಆತ್ಮಾವಲೋಕನ ಸಭೆ ನಡೆಸಿರಲಿಲ್ಲ. ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಕೊನೆಗೂ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಾಯಕರ ಒಗ್ಗೂಡಿಸುವ ಪ್ರಯತ್ನ ನಡೆದಿದೆ. ಸೋತ ಹಾಗೂ ಗೆದ್ದ ನಾಯಕರ ಜೊತೆಗೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಆತ್ಮಾವಲೋಕನ ಸಭೆ ನಡೆಸಿದರು.
ಶಾಸಕರು, ಪರಾಜಿತ ಅಭ್ಯರ್ಥಿಗಳಿಂದ ಭುಗಿಲೆದ್ದ ಆಕ್ರೋಶ
ಒಂದ್ಕಡೆ ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕಸರತ್ತು ಜೋರಾಗಿದ್ರೆ ಮತ್ತೊಂದು ಕಡೆ ಸೋಲಿಗೆ ಅಸಮಾಧಾನವು ಹೊರ ಬಿದ್ದಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರೆ ಸೋತ ನಾಯಕರ ಸೋಲಿಗೆ ಪರಾಮರ್ಶೆ ಮಾಡಲಾಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಕಟೀಲ್, ಮಾಜಿ ಸಿಎಂಗಳಾದ ಬಿಎಸ್ವೈ, ಬೊಮ್ಮಾಯಿ, ಮಾಜಿ ಸಚಿವ ಸಿ.ಟಿ ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆಯೇ ಎಲ್ಲದಕ್ಕೂ ಮೂಲ ಮಂತ್ರ ಎಂಬ ಸಂದೇಶ ರವಾನೆಯಾಗಿದೆ. ಈ ಮೂಲಕ ಮುಂಬರುವ ಚುನಾವಣೆ ಸಿದ್ಧತೆ ಬಗ್ಗೆ ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಸ್ವಪಕ್ಷದ ವಿರುದ್ಧವೇ ಗರಂ ಆದ ಎಂಟಿಬಿ ನಾಗರಾಜ್!
ಎರಡು ವಿಭಾಗಗಳಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಗೆದ್ದ ನೂತನ ಶಾಸಕರು ಭಾಗಿಯಾದರು. ಬಿಜೆಪಿಯ ಹೀನಾಯ ಸೋಲಿನ ಬಗ್ಗೆ ಗೆದ್ದ ಶಾಸಕರು ಕೂಡ ಒಂದಷ್ಟು ಅಸಮಾಧಾನ ತೋಡಿಕೊಂಡರು. ಆಡಳಿತ ವಿರೋಧಿ ಅಲೆ ಹಾಗೂ ಬಿಜೆಪಿ ಸರ್ಕಾರದ ಮೇಲಿದ್ದ ಒಂದಷ್ಟು ಆರೋಪಗಳೇ ನಮ್ಮ ಸ್ನೇಹಿತರು ಸೋಲಿಗೆ ಕಾರಣವಾಯಿತು ಅಂತ ತಿಳಿಸಿದ್ರು. ಇತ್ತ ಪರಾಜಿತ ಅಭ್ಯರ್ಥಿಗಳು ಮಾತ್ರ ಬಿಜೆಪಿ ಕಚೇರಿಗೆ ಅಸಮಾಧಾನದ ಮೂಟೆಯನ್ನೇ ಹೊತ್ತು ತಂದಿದ್ರು. ಹಿರಿಯ ನಾಯಕರ ಸಮ್ಮುಖದಲ್ಲಿ ಸೋಲಿನ ಕಹಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಾಜಿ ಸಚಿವ ಎಂಟಿಬಿ ನಾಗರಾಜ್ ಸಿಟ್ಟಾಗಿದ್ರು. ಯಡಿಯೂರಪ್ಪ ಮಾತಿಗೆ ಬಿಜೆಪಿ ಸೇರಿದೆ. ಆದ್ರೆ ಡಾ.ಸುಧಾಕರ್ಗೆ ಜಿಲ್ಲಾ ಉಸ್ತುವಾರಿ ನೀಡಿದ್ರು. ಆತನೂ ಸೋತ, ನಮ್ಮನ್ನೂ ಸೋಲಿಸಿದ ಅಂತ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ. ಅಂತಿಮವಾಗಿ ಸರ್ಕಾರ ಹಾಗೂ ಪಕ್ಷ ತೆಗೆದುಕೊಂಡ ಕೆಲವೊಂದು ನಿರ್ಧಾರದಿಂದಲೇ ಸೋಲಾಯ್ತು ಎಂದು ದೂರಿದ್ರು.
ಸೋಲಿನ ಕಾರಣಗಳೆನು?
- ಕಾಂಗ್ರೆಸ್ನ ಗ್ಯಾರಂಟಿ ಯೋಜನೆ
- 40% ಕಮಿಷನ್ ಆರೋಪ
- ಸಚಿವರ ಕಾರ್ಯವೈಖರಿ
- ಪಕ್ಷದ ಕೆಲ ನಿರ್ಧಾರಗಳು
- ನಾಯಕರ ವರ್ತನೆ, ಸಂಘಟನೆಗೆ ನಿರ್ಲಕ್ಷ್ಯ
- ಒಳ ಮೀಸಲಾತಿ ಹಂಚಿಕೆಯ ಒಳೇಟು
ಚುನಾವಣೆಯಲ್ಲಿ ಸೋತ ಪ್ರಭಾವಿ ನಾಯಕಾರಾದ ಡಾ. ಸುಧಾಕರ್, ವಿ.ಸೋಮಣ್ಣ, ಮಾಧುಸ್ವಾಮಿ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆಯಿಂದ ದೂರ ಉಳಿದಿದ್ದಾರೆ. ಇದೀಗ ಸೋತ ಅಭ್ಯರ್ಥಿಗಳ ಸೋಲಿನ ಅಭಿಪ್ರಾಯಗಳ ರಾಜ್ಯ ಹಿರಿಯ ನಾಯಕರಿಗೆ ತಲೆ ನೋವು ಹೆಚ್ಚಾಗುವಂತೆ ಮಾಡಿದೆ. ಆದರೆ ಹೈಕಮಾಂಡ್ ನಾಯಕರು ಯಾವ ರೀತಿ ಸಮಸ್ಯೆ ಬಗೆಹರಿಸಿ ರಾಜ್ಯ ನಾಯಕರನ್ನು ಮುಂದಿನ ಲೋಕ ಯುದ್ಧಕ್ಕೆ ಸಜ್ಜುಗೊಳಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.