ಮಂಗಳೂರು : ಮಂಗಳೂರಿನ ಬಿಷಪ್ ಹೌಸ್ನಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಪ್ರಕರಣವು ಧಾರ್ಮಿಕ ಕೇಂದ್ರಗಳಲ್ಲಿನ ಅವಿವೇಕಿ, ಪುರುಷಾಡಳಿದ ಮುಖವನ್ನು ಅನಾವರಣ ಗೊಳಿಸಿದೆ, ಧಾರ್ಮಿಕ ಸಂಸ್ಥೆಗಳಲ್ಲೇ ಮಹಿಳೆ ಅಸುರಕ್ಷಿತಳೆಂದರ ಏನರ್ಥ? ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಖಾರವಾಗಿ ಪ್ರಶ್ನಿಸಿದರು. ಜಾತ್ಯಾತೀತ, ಧರ್ಮಾತೀತ ಜನಸ್ಪಂದನೆ ಇರುವಂತಹ ಮುಖ್ಯಮಂತ್ರಿಗಳು, ಲಿಂಗ ಸಂವೇದನೆ ಇರುವ ಹಲವಾರು ವ್ಯಕ್ತಿಗಳು ಸರಕಾರದಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸರಕಾರವು ತುರ್ತಾಗಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು, ಮತ್ತು ಅನ್ಯಾಯಕ್ಕೊಳಗಾಗುವ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಅನುವಾಗುವಂತೆ ಸಂಪೂರ್ಣ ವ್ಯವಸ್ಥೆಯನ್ನು ಮಹಿಳಾಪರವಾಗಿ ನಿರ್ಮಿಸಬೇಕು ಎಂದೂ ಅವರು ಸರಕಾರವನ್ನು ಒತ್ತಾಯಿಸಿದರು. ಅವರು ಪೀಪಲ್ ಮೀಡಿಯಾದೊಂದಿಗೆ ಮಾತಾಡುತ್ತಿದ್ದರು.
ಸಿ.ಎಸ್.ಐ. ಕೆ.ಎಸ್.ಡಿ. ಧರ್ಮಪ್ರಾಂತ್ಯ ಕಛೇರಿಯಲ್ಲಿ ಕಳೆದ 11 ತಿಂಗಳುಗಳಿಂದ, ಪಾದ್ರಿ ನೋಯಲ್ ಕರ್ಕಡ ಮತ್ತು ಖಜಾಂಜಿ ವಿನ್ಸೆಂಟ್ ಪಾಲನ್ನ ಅವರಿಂದ ನಿರಂತರ ದೌರ್ಜನ್ಯ, ಮಾನಸಿಕ, ದೈಹಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಪಟ್ಟು ಖಾಯಂ ಕೆಲಸದಿಂದ ವಂಚಿತಳಾಗಿರುವ ಹೆಣ್ಣುಮಗಳಿಗೆ ನ್ಯಾಯ ಒದಗಿಸಿಕೊಡಲು ಮತ್ತು ಆರೋಪಿಗಳ ಮೇಲೆ ಕಾನೂನು ಕ್ರಮ ಜರಗಿಸಲು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಮಂಗಳೂರಿನ ಸಿ ಎಸ್ ಐ ಡಯಾಸಿಸನ್ ಆಫೀಸಿನ ಎದುರು ಬುಧವಾರ ಹಮ್ಮಿಕೊಂಡ ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತಾಡಿದರು.
ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಂಗಳೂರು, ಒಡನಾಡಿ ಸೇವಾ ಸಂಸ್ಥೆ, ಮೈಸೂರು ಮತ್ತು ನಾವೆದ್ದು ನಿಲ್ಲದಿದ್ದರೆ, ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈಗಾಗಲೇ POSH ಕಮಿಟಿಗಳಲ್ಲಿ ಕೆಲಸ ಮಾಡಿದ ಅನುಭವಿ ಮರ್ಲಿನ್ ಮಾರ್ಟಿಸ್ ಮಾತಾಡಿ ಈ ಸಂಸ್ಥೆಯು ಲೈಂಗಿಕ ಕಿರುಕುಳ ಸಮಿತಿಯನ್ನು ರಚಿಸದೆ ಲೈಂಗಿಕ ಕುರುಕುಳ ತಡೆ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದೆ. ಯಾವುದೇ ಧಾರ್ಮಿಕ ಸಂಸ್ಥೆಗಳು ಈ ಸಮಿತಿಯನ್ನು ಮಾಡಿಲ್ಲ ಎಂಬುದು ವಿಷಾದನೀಯ ಎಂದರಲ್ಲದೆ ಜಿಲ್ಲಾಧಿಕಾರಿಗಳು ಇವುಗಳನ್ನು ಗಮನಿಸಿ ಸಮಿತಿಗಳನ್ನು ರಚಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಬೆಂಗಳೂರಿನ ಗಮನ ಸಂಸ್ಥೆಯ ಮಮತಾ ಅವರು, ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಸಂತ್ರಸ್ತೆಯ ಉದ್ಯೋಗಿ ಸಂಸ್ಥೆಯು ಉಲ್ಲಂಘಿಸಿದೆ, ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿ POSH ಕಮಿಟಿಗಳನ್ನು ರಚಿಸಬೇಕು ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರಲ್ಲದೆ ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
ಇದೇ ಆರೋಪಿ ಪಾದ್ರಿ ನೋಯೆಲ್ ಕರ್ಕಡ ಮತ್ತೋರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುತ್ತಾನೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಆರೋಪಿಯು ಜಾಮೀನು ಸಿಗದೆ ಎರಡು ತಿಂಗಳಿಂದ ತಲೆ ಮರೆಸಿಕೊಂಡಿದ್ದರೂ ಆರೋಪಿಯನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದು ನಾಚಿಕೆಗೇಡು. ಈ ಸಂಬಂಧ ಡಯಾಸಿಸ್ ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಇದ್ದು ಸಂಸ್ಥೆಯು ಆತನನ್ನು ಸ್ವ ಇಚ್ಚೆಯಿಂದ ರಕ್ಷಿಸುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ ಎಂದು ತಮ್ಮ ಅಸಮಾಧಾನವನ್ನು ಗುರುಪ್ರಸಾದ್ ಹೊರಹಾಕಿದರು.
ಮನವಿ ಸ್ವೀಕರಿಸಲು ಬಾರದ ಬಿಷಪ್
ತಮ್ಮ ಸಂಸ್ಥೆಯ ಗೇಟಿನೆದುರೇ ಧರಣಿ ನಿರತರು ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದರೂ ಸಂಸ್ಥೆಯ ಯಾರೊಬ್ಬರೂ ಬಂದು ವಿಚಾರಿಸಲಿಲ್ಲ. ಸಾರ್ವಜನಿಕರಿಗೆ ಕಚೇರಿ ವೇಳೆಯಲ್ಲಿ ಯಾವಾಗಲೂ ತೆರೆದಿರಬೇಕಾದ ಸಂಸ್ಥೆ ಗೇಟಿಗೆ ಬೀಗ ಹಾಕಿ ಪ್ರವೇಶ ನಿರ್ಬಂಧಿಸಿತ್ತು. ಧರಣಿಯ ಬಳಿಕ ಬಿಷಪ್ ಅವರಿಗೆ ಮನವಿ ನೀಡಲು ಅನುಮತಿ ನಿರಾಕರಿಸಲಾಯ್ತು. ಇದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ಗೇಟಿನ ಎದುರು ನಿಂತು ಪ್ರೀತಿ, ಗೌರವಗಳಿಂದ ಬಿಷಪ್ ಅವರನ್ನು ಗೇಟಿನ ಬಳಿಗೆ ಬಂದು ಮನವಿ ಸ್ವೀಕರಿಸುವಂತೆ ಕೇಳಿಕೊಂಡರು. ಅದಕ್ಕೂ ಅವರು ಕ್ಯಾರೇ ಅನ್ನದಾಗ ಯಾರಾದರೂ ಸಿಬ್ಬಂದಿಗಳನ್ನು ಕಳುಹಿಸಲು ಕೇಳಿ ಕೊಳ್ಳಲಾಯಿತು. ಅದೂ ಫಲಿಸಲಿಲ್ಲ ಎಂದು ʼನಾವೆದ್ದು ನಿಲ್ಲದಿದ್ದರೆʼ ಸಂಸ್ಥೆಯ ವಿದ್ಯಾ ದಿನಕರ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಮತ್ತು ಆಯುಕ್ತರ ಅನುಪಸ್ಥಿತಿಯಲ್ಲಿ ಉಪ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಒಪ್ಪಿಸಿ ಮುಂದಿನ ಕ್ರಮಗಳಿಗೆ ಸಂಘಟನೆಗಳು ಒತ್ತಾಯಿಸಿದವು. ನಾವೆದ್ದು ನಿಲ್ಲದಿದ್ದರೆ, ಗಮನ, ಸಂಗಮ. ಸಮರ, ಸಂಚಲನ, ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕರಾವಳಿ ಲೇಖಕಿ ವಾಚಕಿಯರ ಸಂಘ, ಒಡನಾಡಿ, ಯುವ ಮುನ್ನಡೆ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪೂರಕ ಕಾನೂನು ಸುಗಮಗಾರರ ಸಮುಚ್ಚಯ ಮುಂತಾದ ಸಂಘಟನೆಗಳು ಸಹಭಾಗಿತ್ವ ನೀಡಿದ್ದವು. ಅಲ್ಲದೆ ಹಲವಾರು ಮಂಗಳೂರಿನ ಹಲವಾರು ಸಂವೇದನಾ ಶೀಲರು ಭಾಗವಹಿಸಿ ಸಂತ್ರಸ್ತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.