ವಿದ್ಯುತ್ ದರ ಹೆಚ್ಚಳ ವಿರುದ್ಧದ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ: ಕಟೀಲ್
ರಾಜ್ಯ ಸರ್ಕಾರ ವಿರುದ್ಧದ ಹೋರಾಟದ ರೂಪುರೇಷೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಜೂನ್ 22ರಿಂದ ನಮ್ಮ ತಂಡಗಳ ರಾಜ್ಯ ಪ್ರವಾಸ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಂಗಳೂರು: ವಿದ್ಯುತ್ ದರ ಎರಿಕೆ ಖಂಡಿಸಿ ಎಫ್ಕೆಸಿಸಿಐ ಹಾಗೂ ಕಾಸಿಯಾ ಕರೆ ನೀಡಿರುವ ರಾಜ್ಯ ಬಂದ್ಗೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಠಮಾರಿ ಧೋರಣೆ ಕೈಬಿಡಬೇಕು, ಉದ್ಯಮಶೀಲರಿಗೆ ಅವಕಾಶ ಕೊಡಬೇಕು. ವಿದ್ಯುತ್ ದರದ ಬಗ್ಗೆ ಉದ್ಯಮಿಗಳ ಸಮಸ್ಯೆ ಆಲಿಸಿ, ನ್ಯಾಯ ಕೊಡಿಸುವ ಹಾಗೂ ಉದ್ಯಮಶೀಲತೆಗೆ ಅವಕಾಶ ಮಾಡಿಕೊಡುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಒಂದು ತಿಂಗಳಲ್ಲಿ ಈ ರಾಜ್ಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೊಡೆತ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಾಲಿನ ಬೆಂಬಲ ಬೆಲೆ ಒಂದೂವರೆ ರೂಪಾಯಿಗಳನ್ನು ಹಿಂಪಡೆದಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಲಾಗಿದೆ, ರೈತರು ಹಾಗು ಜನಸಾಮಾನ್ಯರಿಗೂ ಇದರಿಂದ ತೊಂದರೆಯಾಗಿದೆ. ನಾವು ಈ ಹಿಂದೆ ಎಸ್ಸಿ, ಎಸ್ಟಿ ಕುಟುಂಬಗಳಿಗೆ 75 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡಿದ್ದೇವೆ. ಆದರೀಗ ಬೇರೆ ದರ ಹೆಚ್ಚಿಸುವ ಕೆಲಸ ಮಾಡದೆ, ವಿದ್ಯುತ್ ದರ ಏರಿಸಲಾಗಿದೆ. ಜೊತೆಗೆ ಲೋಡ್ ಶೆಡ್ಡಿಂಗ್ ಕೂಡ ಮಾಡಲಾಗುತ್ತಿದೆ. ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸಿಗುತ್ತಿಲ್ಲ. ಎಲ್ಲ ರೀತಿಯ ವಂಚನೆಗಳು ಸರ್ಕಾರದಿಂದ ನಡೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿರುವ ಎಫ್ಕೆಸಿಸಿಐ ಹಾಗೂ ಕಾಸಿಯಾ ಸಂಸ್ಥೆಗೆ ನಾವು ಬೆಂಬಲಿಸುತ್ತೆ ಎಂದರು.
ನಮ್ಮ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ತಂದು, ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದೆವು. ಆದರೆ ಅದನ್ನೆಲ್ಲ ವಾಪಸ್ ಪಡೆಯುವ ಕಾಂಗ್ರೆಸ್ನವರಿಗೆ ಕರೆಂಟ್ ದರ ಹೆಚ್ಚಳವನ್ನು ವಾಪಸ್ ಪಡೆಯಲು ಆಗಲ್ವಾ? ಎಂದು ವಿದ್ಯುತ್ ದರ ಹೆಚ್ಚಳಕ್ಕೆ ಬಿಜೆಪಿ ಒಪ್ಪಿಗೆ ನೀಡಿದ್ದು ಎನ್ನುವ ಕಾಂಗ್ರೆಸ್ ಆರೋಪಕ್ಕೆ ಕಟೀಲ್ ತಿರುಗೇಟು ನೀಡಿದರು.
10 ಕೆಜಿ ಅಕ್ಕಿ ಕೊಡಿ: ಕೇಂದ್ರ ಸರ್ಕಾರದ ವಿರುದ್ಧ ಅಕ್ಕಿ ವಿಚಾರವಾಗಿ ನಾಳೆ ಕಾಂಗ್ರೆಸ್ ಪ್ರತಿಭಟನೆ ಮಾಡಲು ಹೊರಟಿದೆ. ಜೋರಾಗಿ ಪ್ರತಿಭಟನೆ ಮಾಡಬೇಕು, ಯಾಕೆಂದರೆ ಮೊನ್ನೆಯವರೆಗೂ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿರುವುದು ಎಂಬುದು ಜನರಿಗೆ ಗೊತ್ತಿರಲಿಲ್ಲ. ಪ್ರತಿಭಟನೆ ಮಾಡುವುದರಿಂದ ಜನರಿಗೆ ಈ ಬಗ್ಗೆ ಅರಿವಾಗುತ್ತದೆ. ಈ ಹಿಂದೆ 2013ರಿಂದ 2018ರವರೆಗೂ ಸಿದ್ದರಾಮಯ್ಯ ಸರ್ಕಾರವಿದ್ದಾಗ ಪ್ರತಿ ಕೆಜಿಗೆ ಮೂರು ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟು ಅಕ್ಕಿ ತಂದು, ಇಲ್ಲಿ ಇವರ ಫೋಟೋ ಹಾಕಿಕೊಳ್ಳುತ್ತಿದ್ದರು. ಈಗ ಕೇಂದ್ರ ಸರ್ಕಾರ ತಲಾ 5 ಕೆ.ಜಿ ಅಕ್ಕಿಯನ್ನು ಪಡಿತರದಾರರಿಗೆ ನೀಡುತ್ತಿದೆ. ಸಾಗಾಣಿಕೆ ವೆಚ್ಚವನ್ನೂ ಭರಿಸುತ್ತಿದೆ. ಐದು ಕೆಜಿ ಈಗಾಗಲೇ ಕೇಂದ್ರ ಕೊಡುತ್ತದೆ, ರಾಜ್ಯದಿಂದ ನೀವು ನೀಡುತ್ತೇವೆಂದ 10 ಕೆಜಿ ಅಕ್ಕಿಯನ್ನು ಕೊಡಿ ಎಂದು ಆಗ್ರಹಿಸಿದರು.
ಪ್ರತಿಪಕ್ಷ ನಾಯಕರ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಟೀಲ್, ಅಧಿವೇಶನ ಪ್ರಾರಂಭವಾಗುವಾಗ ನಮಗೆ ವಿಪಕ್ಷ ನಾಯಕನ ಅವಶ್ಯಕತೆ ಬೀಳುತ್ತದೆ. ಆಗ ನಾವು ಆಯ್ಕೆ ಮಾಡುತ್ತೇವೆ. ಸರ್ಕಾರ ನಡೆಸಲು ಬೇಕಾಗಿರುವುದು ಸಿಎಂ. ಸಿಎಂ ಮಾಡಲು ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆದರೆ ನಮಗೆ ಅಷ್ಟು ದಿನದ ಅವಶ್ಯಕತೆ ಇಲ್ಲ. ಸಮಯ, ಸಂದರ್ಭ ಬಂದಾಗ ಆಯ್ಕೆ ಮಾಡುತ್ತೇವೆ, ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.
ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರತಾಪ ಸಿಂಹ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಬಿಜೆಪಿಯಲ್ಲಿ ಎಲ್ಲೂ ಹೊಂದಾಣಿಕೆ ರಾಜಕಾರಣ ಇಲ್ಲ, ನಾವು ಹೋರಾಟ ಮಾಡಿಯೇ ಬಂದಿದ್ದೇವೆ. ಅದಕ್ಕೆ ಡಿ.ಕೆ. ಶಿವಕುಮಾರ್ ಎದುರು ಅಶೋಕ್, ಸಿದ್ದರಾಮಯ್ಯ ಎದುರು ಸೋಮಣ್ಣರನ್ನು ನಿಲ್ಲಿಸಿದೆವು. ಹೊಂದಾಣಿಕೆ ರಾಜಕಾರಣ ಎಲ್ಲಿದೆ? ಅವರವರ ಭಾವನೆಗಳಿಗೆ ಸರಿಯಾಗಿ ಮಾತಾಡಿದ್ದಾರೆ. ಈ ಬಗ್ಗೆ ಅವರನ್ನು ಕರೆದು ನಾವು ಮಾತಾಡುತ್ತೇವೆ ಎಂದು ತಿಳಿಸಿದರು.