ಅಕ್ರಮ ಮರಳು ಸಾಗಣೆ ದಂಧೆಗಾಗಿ ಹೆಡ್​ಕಾನ್ಸ್‌ಟೇಬಲ್ ಹತ್ಯೆಗೈದ ಆಘಾತಕಾರಿ ಘಟನೆ ಇತ್ತೀಚೆಗೆ ನಡೆದಿತ್ತು. ಪ್ರಕರಣದ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

ಕಲಬುರಗಿ: ಮರಳು ಸಾಗಣೆ ವೇಳೆ ಟ್ಯಾಕ್ಟರ್ ಹರಿಸಿ ಹೆಡ್​​ಕಾನ್ಸ್‌ಟೇಬಲ್ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಸಾಯಿಬಣ್ಣಾ ಕರಜಗಿ ಕಾಲಿಗೆ ಪೊಲೀಸರು ಗುಂಡು‌ ಹೊಡೆದಿದ್ದಾರೆ.

ಇಂದು ವಿಜಯಪುರ ಜಿಲ್ಲೆ ಆಲಮೇಲ ಬಳಿ ಸಾಯಿಬಣ್ಣ ಕರಜಗಿಯನ್ನು ಬಂಧಿಸಿ ಕಲಬುರಗಿಗೆ ಕರೆತರಲಾಗುತಿತ್ತು. ಮಾರ್ಗಮಧ್ಯೆ ಜೇರಟಗಿ‌ ಮಂದೇವಾಲ ಬಳಿ ಮೂತ್ರವಿಸರ್ಜನೆಗೆ ನಿಂತಾಗ ಪೊಲೀಸರ ಮೇಲೆಯೇ ಹಲ್ಲೆ‌ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಜೇವರ್ಗಿ ಪಿಎಸ್‌ಐ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ತನ್ನ ಕೃತ್ಯ ಮುಂದುವರಿಸಿದಾಗ ಆತ್ಮರಕ್ಷಣೆಗಾಗಿ ಪಿಎಸ್‌ಐ, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಜೇವರ್ಗಿ ತಾಲೂಕಿನ ಹುಲ್ಲೂರ್ ಚಕ್‌ಪೊಸ್ಟ್ ಬಳಿ ಟ್ರ್ಯಾಕ್ಟರ್ ಹರಿಸಿ‌ ಜೂನ್ 15ರಂದು ಹೆಡ್ ಕಾನ್ಸ್​ಟೇಬಲ್ ಮಯೂರ್ ಚೌಹಾನ್ (51) ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಹಾಗೂ ಪ್ರಮುಖ ಆರೋಪಿ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಸಿದ್ದಪ್ಪನನ್ನು ಬಂಧಿಸಲಾಗಿತ್ತು. ಕೃತ್ಯದ ನಂತರ ಪರಾರಿಯಾಗಿದ್ದ ಸಾಯಿಬಣ್ಣ ಕರಜಿಗಿಯನ್ನು ಇಂದು ಬಂಧಿಸಿ ಕರೆತರಲಾಗುತ್ತಿದೆ.

ಅಕ್ರಮ ಮರಳು ದಂಧೆಕೋರರ ಅಟ್ಟಹಾಸ: ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮಯೂರ್ ಹತ್ಯೆ ಪ್ರಕರಣ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಿದ್ದ ಪೊಲೀಸರು ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿ ತೀವ್ರ ಶೋಧ ನಡೆಸುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಇಶಾ ಪಂತ್, ಮೂರು ತಂಡಗಳನ್ನು ರಚಿಸಿ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಇಂದು ಇಬ್ಬರು ಪಿಎಸ್​​ಐ ನೇತೃತ್ವದ ತಂಡ ವಿಜಯಪುರಕ್ಕೆ ತೆರಳಿ ಆಲಮೇಲ ಗ್ರಾಮದ ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ದಾರೆ. ಮಾರ್ಗಮಧ್ಯೆ ಪಿಎಸ್​​ಐ ಬಸವರಾಜ ಚಿತ್ತಕೋಟೆ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಅಲರ್ಟ್ ಆದ ಜೇವರ್ಗಿ ಠಾಣೆ ಪಿಎಸ್​ಐ ಸಂಗಮೇಶ್ ಅಂಗಡಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದ್ರೂ ಶರಣಾಗದ ಆರೋಪಿ ಸಾಯಿಬಣ್ಣ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿಯ ಹಲ್ಲೆಯಿಂದ ಪಿಎಸ್​ಐ ಬಸವರಾಜ ಕೈ ಮತ್ತು ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ಕಲಬುರಗಿ ನಗರದ ಬಸವವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಿಎಸ್​ಐ ಆರೋಗ್ಯವನ್ನು ಎಸ್​ಪಿ ಇಶಾ ಪಂತ್ ವಿಚಾರಿಸಿದ್ದಾರೆ. ಗುಂಡೇಟು ತಿಂದು ಗಾಯಗೊಂಡಿರುವ ಆರೋಪಿಯನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮರಳು ದಂಧೆಯಲ್ಲಿ ತೊಡಗಿದ್ದ ಸಾಯಿಬಣ್ಣ ಮೇಲೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ರೌಡಿಶೀಟರ್ ಓಪನ್ ತೆರೆಯಲಾಗಿದೆ. ಕೊಲೆ ಯತ್ನ, ದರೋಡೆ ಮತ್ತು ಕೊಲೆ ಪ್ರಕರಣಗಳು ಈತನ ಮೇಲಿವೆ.

ಅಮಾನತು ಆದೇಶ: ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದಡಿ ಜೇವರ್ಗಿ ಸಿಪಿಐ ಭೀಮನಗೌಡ್, ನೆಲೋಗಿ ಠಾಣೆ ಪಿಎಸ್​​ಐ ಗೌತಮ್ ಮತ್ತು ಕಾನ್ಸ್​ಟೇಬಲ್ ರಾಜಶೇಖರ್ ಅವರನ್ನು ಎಸ್ಪಿ ಇಶಾ ಪಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *