ಅಕ್ಕಿ ಬದಲು ದುಡ್ಡು ಕೊಟ್ಟರೆ ತಿನ್ನಲಾಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈಗ ನಾವು ಅದೇ ಪ್ರಶ್ನೆಯನ್ನು ಅವರಿಗೆ ಕೇಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ನವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನಿಡಿದ್ದರು. ಈಗ ಅಕ್ಕಿಯ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾತುಕಟ್ಟೆಯಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ (Basavaraj Bommai) ಹೇಳಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ. ಎಷ್ಟಾದರೂ ಆಗಲಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಹಣ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ. ಇವರು ಮತ್ತೆ ಮಾತಿಗೆ ತಪ್ಪಿದ್ದಾರೆ ಎಂದು ಆರೊಪಿಸಿದರು.
ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ. ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡುವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ. ಕರೆಂಟ್ ವಿಚಾರದಲ್ಲಿಯೂ ಕಂಡಿಷನ್ ಹಾಕಿ ಅದನ್ನೇ ಮಾಡಿದ್ದಾರೆ. ಹತ್ತು ಕೆಜಿ ಅಕ್ಕಿಯನ್ನು ನರೇಂದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಸೆಂಬರ್ ವರೆಗೂ ಕೊಟ್ಟಿದೆ. ಇವರೇ ಮೊದಲೆಲ್ಲಾ ಎಷ್ಟೇ ಖರ್ಚಾದರೂ ಅಕ್ಕಿ ಕೊಡುವುದಾಗಿ ಹೇಳಿದವರು ಈಗ ಮಾತಿಗೆ ತಪ್ಪಿ ಜನರಿಗೆ ಎರಡೂವರೆ ಕೆಜಿ ಮಾತ್ರ ದೊರೆಯುವಂತೆ ಮಾಡಿದ್ದಾರೆ ಎಂದರು.
ಅಕ್ಕಿ ಬದಲು ದುಡ್ಡು ಕೊಟ್ಟರೆ ತಿನ್ನಲಾಗುತ್ತಾ ಎಂದಿದ್ದ ಸಿದ್ದರಾಮಯ್ಯ
ಅಕ್ಕಿ ಬದಲು ದುಡ್ಡು ಕೊಟ್ಟರೆ ತಿನ್ನಲಾಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈಗ ನಾವು ಅದೇ ಪ್ರಶ್ನೆಯನ್ನು ಅವರಿಗೆ ಕೇಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ, ಜನರಿಗೆ ಅಕ್ಕಿ ಕೊಡಿ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 60 ರೂಪಾಯಿ ಇದೆ. ನೀವು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡುವುದಾಗಿ ಹೇಳಿದ್ದೀರಿ. ಹಾಗಾದರೆ ನೀವು ಎರಡೂವರೆ ಕೆಜಿ ಅಕ್ಕಿಗೆ ಹಣ ನೀಡುತ್ತಿದ್ದೀರಿ. ಕೇಂದ್ರ ಸರ್ಕಾರ ಪಡಿತರದಾರರಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀವು 5+5 ಎಂದು ಹೇಳಿದ್ರಾ? 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ, ಈಗ ಕೊಡಿ. ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿದ್ದೀರಿ. ರಾಜ್ಯದ ಜನರಿಗೆ ನೀವು ಮೋಸ ಮಾಡಿದ್ದೀರಿ ಎಂದು ಬೊಮ್ಮಾಯಿ ಕಿಡಿ ಕಾರಿದ್ದಾರೆ.