ಜುಲೈ ತಿಂಗಳಲ್ಲೇನಾದರೂ ನೀರಿನ ಕೊರತೆ ಆದರೆ ಅದಕ್ಕೆ ಈ ಅಶಿಸ್ತು ಹೊಣೆಯಾಗಬೇಕಾಗುತ್ತದೆ. ಏಕೆ ಹೀಗೆ ಆಯ್ತು ಅಂತಾ ವರದಿ ಬಂದ ಬಳಿಕ ಮಾತನಾಡುವೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬೆಳಗಾವಿ: ಕರ್ನಾಟಕದ ಹಲವು ಡ್ಯಾಂಗಳಲ್ಲಿ ನೀರು ಡೆಡ್ ಸ್ಟೋರೇಜ್ ತಲುಪಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ (Krishna Byre Gowda), ಈ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕಳೆದ ವರ್ಷ ಒಳ್ಳೆಯ ಮಳೆಯಾಗಿದ್ದರೂ ಈಗ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇದೆ. ತೀವ್ರ ಬರಗಾಲ ಇದ್ದಾಗಲೂ ನೀರಿನ ಮಟ್ಟ ಇಷ್ಟು ಕಡಿಮೆ ಇರಲಿಲ್ಲ. ಇದು ಹೇಗೆ ಆಯ್ತು ಎಂಬುದಾಗಿ ವರದಿ ನೀಡಲು ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಏಕೆ ಕನಿಷ್ಠ ನೀರಿನ ಮಟ್ಟ ಇದೆ? ಒಳ್ಳೆಯ ಮಳೆ ಆಗಿ ಯಥೇಚ್ಛವಾಗಿ ನೂರಾರು ಟಿಎಂಸಿ ಬೇರೆ ರಾಜ್ಯಗಳಿಗೆ ಬಿಟ್ಟರೂ ನವೆಂಬರ್ವರೆಗೆ ಎಲ್ಲಾ ಜಲಾಶಯ ತುಂಬಿ ಹರಿದಿದ್ದವು. ಇವತ್ತು ನೀರಿನ ಮಟ್ಟ ಇಷ್ಟು ಕಡಿಮೆ ಆಗಲು ನಿರ್ವಹಣೆಯಲ್ಲಿ ಅಶಿಸ್ತು ಕಾರಣ. ನಿರ್ವಹಣೆ ಸರಿಯಾಗಿ ಮಾಡದಿದ್ದಾಗ ಇಷ್ಟು ಕಡಿಮೆ ನೀರು ಇರೋಕೆ ಸಾಧ್ಯ. ಜಲಾಶಯಗಳ ನೀರಿನ ಮಟ್ಟ ಕುಸಿತವಾದರೂ ಇನ್ನೂ ಕುಡಿಯುವ ನೀರಿಗೆ ಸಮಸ್ಯೆ ಆಗಿಲ್ಲ. ಅದು ಅದೃಷ್ಟ ಅನ್ನಬಹುದು ಎಂದು ಹೇಳಿದ್ದಾರೆ.
ಜುಲೈ ತಿಂಗಳಲ್ಲೇನಾದರೂ ನೀರಿನ ಕೊರತೆ ಆದರೆ ಅದಕ್ಕೆ ಈ ಅಶಿಸ್ತು ಹೊಣೆಯಾಗಬೇಕಾಗುತ್ತದೆ. ಏಕೆ ಹೀಗೆ ಆಯ್ತು ಅಂತಾ ವರದಿ ಬಂದ ಬಳಿಕ ಮಾತನಾಡುವೆ ಎಂದು ಅವರು ಹೇಳಿದ್ದಾರೆ.
ಜಲಾಶಯಗಳಲ್ಲಿ ನೀರು ಕನಿಷ್ಠಮಟ್ಟ ಮುಟ್ಟಿದ ಮೇಲೆ ಕುಡಿಯುವ ನೀರನ್ನು ಉಳಿಸಿಕೊಳ್ಳುವುದು ಕಡ್ಡಾಯ. ಅದನ್ನು ಮೀರಿ ನೀರು ಬಿಟ್ಟು ಇವತ್ತು ಆತಂಕದ ಪರಿಸ್ಥಿತಿಯಲ್ಲಿ ಇದ್ದೇವೆ. ಎಲ್ಲಾ ಜಲಾಶಯಗಳಲ್ಲೂ ಇಷ್ಟು ಕನಿಷ್ಠ ಪ್ರಮಾಣದಲ್ಲಿ ನೀರು ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ.
ರಾಜಕೀಯ ಒತ್ತಡ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಮೇಲ್ನೋಟಕ್ಕೆ ಆ ರೀತಿ ಕಾಣುತ್ತದಾದರೂ ಆ ಬಗ್ಗೆ ಹೆಚ್ಚು ತಿಳಿಯದೇ ಏನೂ ಹೇಳಲಾಗದು. ಆಲಮಟ್ಟಿಯಲ್ಲಿ ಕಳೆದ ವರ್ಷ 30 ಟಿಎಂಸಿ ಇತ್ತು ಈಗ 1.92 ಟಿಎಂಸಿ ಇದೆ. ಕಳೆದ ವರ್ಷ ಮುಂಗಾರು ಮಳೆ ಚೆನ್ನಾಗಿತ್ತು ಅಂದ್ರೆ 24 ಟಿಎಂಸಿ ಆದ್ರೂ ಇರಬೇಕಿತ್ತು. ರೈತರನ್ನು ಕಾಪಾಡಬೇಕು, ಜನಪ್ರತಿನಿಧಿಗಳಿಗೂ ಗೌರವ ಕೊಡುವೆ ಇಲ್ಲ ಅಂತೇನಿಲ್ಲ. ಆದ್ರೆ ಕುಡಿಯಲು ನೀರಿಲ್ಲದ ಪರಿಸ್ಥಿತಿಗೆ ನಾವೆಲ್ಲರೂ ತಲುಪಬಾರದು. ಕುಡಿಯುವ ನೀರಿಗೆ ಬಿಕ್ಕಟ್ಟು ಆಗುವ ಸ್ಥಿತಿ ನಾವೆಲ್ಲ ಸೇರಿ ಮಾಡಬಾರದು ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.