ಕಲಬುರಗಿಯ ಮೂವರು ಬಾಲಕರಿಗೆ ‘ಗಾಂಧಾರಿ ವಿದ್ಯೆ’ ಕರಗತ! ಏನಿದು? ಸಾಕಷ್ಟು ಪ್ರಯೋಜನ!
ನೀವು ಗಾಂಧಾರಿ ವಿದ್ಯೆ ಬಗ್ಗೆ ಕೇಳಿದ್ದೀರಾ? ಕಲಬುರಗಿ ಜಿಲ್ಲೆಯ ಬಾಲಕರು ಈ ವಿದ್ಯೆಯಲ್ಲಿ ಪರಿಣತಿ ಪಡೆದಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲವನ್ನೂ ನಿಖರವಾಗಿ ಇವರು ಹೇಳಬಲ್ಲರು.
ಕಲಬುರಗಿ: ಪ್ರಸಿದ್ಧ ಮಹಾಕಾವ್ಯಮಹಾಭಾರತದ ಧೃತರಾಷ್ಟ್ರ- ಗಾಂಧಾರಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?.
ತನ್ನ ಗಂಡನಿಗಿಲ್ಲದ ದೃಷ್ಟಿ ನನಗೇಕೆ? ಎಂದು ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿ ಗಂಡನ ಜೊತೆಗಿದ್ದು ಸೇವೆ ಮಾಡುತ್ತಿದ್ದರು. ಇದು ಮುಂದೆ ಗಾಂಧಾರಿ ವಿದ್ಯೆಯಾಗಿ ಲೋಕ ಪ್ರಸಿದ್ಧಿ ಪಡೆಯಿತು.
ಏನಿದು ಗಾಂಧಾರಿ ವಿದ್ಯೆ?: ಎರಡೂ ಕಣ್ಣುಗಳ ದೃಷ್ಟಿ ಸರಿಯಿದ್ದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲವನ್ನೂ ನೋಡುವ, ತಿಳಿಯುವ, ಪಟಪಟನೆ ಓದುವ ವಿದ್ಯೆಯನ್ನು ಗಾಂಧಾರಿ ವಿದ್ಯೆ ಎಂದು ಕರೆಯುತ್ತಾರೆ. ಬಿಸಿಲೂರೆಂದು ಹೆಸರಾದ ಕಲಬುರಗಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಈ ವಿದ್ಯೆ ಕಲಿತಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲವನ್ನೂ ಹೇಳುತ್ತಾ, ನೋಡುತ್ತಾ, ಓದುತ್ತಾ, ಕಣ್ಣು ಮುಚ್ಚಿಕೊಂಡೇ ಇವರು ಕ್ಯಾರಮ್ ಕೂಡಾ ಆಡಬಲ್ಲರು. ಹೀಗಾಗಿ ತಮ್ಮ ಓರಗೆಯ ಹುಡುಗರಿಂದ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಗುರುಪ್ರಸಾದ್, ಪ್ರಜ್ವಲ್ ಮತ್ತು ಪ್ರತೀಕ್ ಎಂಬ ಮೂವರು ಗಾಂಧಾರಿ ವಿದ್ಯೆ ಕಲಿತಿದ್ದಾರೆ. ಜಿಲ್ಲೆಯ ಚಿಂಚೋಳಿ ತಾಲ್ಲೂಕಿನವರಾದ ಇವರು ಚಿಂಚೋಳಿ ಪಟ್ಟಣದ ಖಾಸಗಿ ಶಾಲೆಯಲ್ಲಿ 4ನೇ, 5ನೇ ಮತ್ತು 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ ತೆರಳಿ ಗಾಂಧಾರಿ ವಿದ್ಯೆ ಕಲಿತು ಬಂದಿದ್ದರಂತೆ. ವಿಶೇಷ ವಿದ್ಯೆ ಕಲಿತ ಬಾಲಕರು ತಮ್ಮ ಎರಡು ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ನಡೆದಾಡುತ್ತಾರೆ. ಯಾವುದೇ ವಸ್ತುವಿನ ಕುರಿತು ಕೇಳಿದರೂ ನಿಖರವಾಗಿ ಹೇಳುತ್ತಾರೆ. ಅಷ್ಟೇಕೆ? ಪುಸ್ತಕವನ್ನೂ ಸರಳವಾಗಿ ಓದುವರು.
ಕಣ್ಣು ಮುಚ್ಚಿಕೊಂಡೇ ಚೆಸ್, ಕ್ಯಾರಮ್ ಹಾಗು ಸೈಕಲ್ ಕೂಡ ಓಡಿಸಬಲ್ಲರು. ಗಾಂಧಾರಿ ವಿದ್ಯೆ ಕಲಿತರೆ ಮೂರನೇ ಕಣ್ಣು ತೆರೆದುಕೊಳ್ಳುತ್ತೆ ಎಂದು ಇವರು ಹೇಳುತ್ತಾರೆ. ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡರೂ ಸಹ ಮೂರನೇ ಕಣ್ಣಿಂದ ಎಲ್ಲವನೂ ನಾವು ನೋಡಬಹುದು ಅನ್ನೋದು ಇವರ ಮಾತು. ಗಾಂಧಾರಿ ವಿದ್ಯೆ ಸಿದ್ದಿಸುವುದು 18 ವರ್ಷ ಪ್ರಾಯದವರೆಗೆ ಮಾತ್ರವಂತೆ.
ಗಾಂಧಾರಿ ವಿದ್ಯೆಯಿಂದ ಏನು ಪ್ರಯೋಜನ?: “ಗಾಂಧಾರಿ ವಿದ್ಯೆ ಕಲಿಕೆಯಿಂದ ಏಕಾಗ್ರತೆ, ತಾಳ್ಮೆ, ಮನಃಶಾಂತಿ ಸಿಗುತ್ತದೆ. ಸದಾ ಲವಲವಿಕೆಯಿಂದ ಇರಬಹುದಂತೆ. ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಮತ್ತು ಓದಿನಲ್ಲಿ ಚುರುಕಾಗಲು ಈ ವಿದ್ಯೆ ಕಲಿಸಿದ್ದೇವೆ” ಎಂದು ಇವರ ಪೋಷಕರು ಹೇಳುತ್ತಾರೆ. ಗಾಂಧಾರಿ ವಿದ್ಯೆ ಕರಗತ ಮಾಡಿಕೊಳ್ಳಲು ಪ್ರತಿದಿನ ಸೂರ್ಯೋದಯಕ್ಕೂ ಮುಂಚೆ ಮತ್ತು ಸೂರ್ಯಾಸ್ತದ ನಂತರ ನಿತ್ಯ ಅಭ್ಯಾಸ ಮಾಡಬೇಕು. ಹೀಗಿದ್ದಲ್ಲಿ ಮಾತ್ರ ಗಾಂಧಾರಿ ವಿದ್ಯೆ ಫಲಿಸುತ್ತದೆ ಎಂದರು.
ಚಿತ್ರದುರ್ಗದಲ್ಲಿ ಗಾಂಧಾರಿ ವಿದ್ಯೆ ಕಲಿತ ವಿದ್ಯಾರ್ಥಿನಿ : ಚಿತ್ರದುರ್ಗದಸಂಜನಾ ಎಂಬ ಬಾಲಕಿ ಗಾಂಧಾರಿ ವಿದ್ಯೆ ಕಲಿತಿದ್ದಾರೆ. ವಾಸನೆ ಮತ್ತು ಗ್ರಹಿಕೆಯಿಂದಲೇ ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ನೋಟುಗಳ ಕ್ರಮಸಂಖ್ಯೆ ಹೇಳುವುದು ಮತ್ತು ಎದುರಿಗೆ ನಿಂತ ವ್ಯಕ್ತಿ ಯಾರೆಂದು ಗುರುತಿಸುವುದು ಇವರಿಗೆ ಸಲೀಸು. ವಸ್ತುಗಳ ಬಣ್ಣ, ವ್ಯಕ್ತಿಗಳು ಧರಿಸಿರುವ ಬಟ್ಟೆಗಳ ಬಣ್ಣಗಳನ್ನು ವಾಸನೆಯಿಂದಲೇ ಗುರುತಿಸಬಲ್ಲರು!.