ಐತಿಹಾಸಿಕ ನಗರಿ ಶ್ರವಣಬೆಳಗೊಳ ರಾಜ್ಯದ ಪ್ರಮುಖ ಜೈನ ಧಾರ್ಮಿಕ ಕೇಂದ್ರಗಳಲ್ಲೊಂದು. ಇಲ್ಲಿನ ಗೊಮ್ಮಟೇಶ್ವರ ಮೂರ್ತಿಯ ಏಕಶಿಲಾ ವಿಗ್ರಹ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಇಂತಹ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟದ ಸಾಧ್ಯತೆಯಿದೆ. ಹೀಗಿದ್ದರೂ ಈ ಬಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯ ಹಾಗೂ ಭ್ರಷ್ಟಾಚಾರ ಆರೋಪ ಮುಖ್ಯ ವಿಷಯ ಆಗಲಿದೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ ಈವರೆಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್ಪಿ) 4 ಬಾರಿ, 5 ಬಾರಿ ಜೆಡಿಎಸ್, 4 ಬಾರಿ ಕಾಂಗ್ರೆಸ್, ಒಮ್ಮೆ ಜನತಾಪಾರ್ಟಿ ಗೆದ್ದಿದೆ.
ಕಣದಲ್ಲಿರುವ ಅಭ್ಯರ್ಥಿಗಳು:
ಸಿ.ಎನ್.ಬಾಲಕೃಷ್ಣ (ಜೆಡಿಎಸ್)
ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್)
ಚಿದಾನಂದ್ (ಬಿಜೆಪಿ)
ಬಾಲಕೃಷ್ಣ: ಜೆಡಿಎಸ್ ಅಭ್ಯರ್ಥಿ ಬಾಲಕೃಷ್ಣ ಜನರ ಮಧ್ಯೆ ಬೆರೆಯುವ ಶಾಸಕರಾಗಿದ್ದಾರೆ. ಅವರು ಏತ ನೀರಾವರಿ, ಕೆರೆ ತುಂಬಿಸುವುದು, ಅಭಿವೃದ್ಧಿ ಸೇರಿದಂತೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಗೆಲುವಿಗೆ ಸಹಕಾರಿಯಾಗಿದೆ. ಅದೇ ರೀತಿ ಅವರ ಮೈನಸ್ ಪಾಯಿಂಟ್ ನೋಡುವುದಾದರೇ, ದ್ವೇಷ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಆರೋಪಗಳಿರುವುದು ಹಿನ್ನಡೆಯಾಗುವ ಕಾರಣವಾಗುವ ಸಾಧ್ಯತೆಯಿದೆ.
ಗೋಪಾಲಸ್ವಾಮಿ: ಕಾಂಗ್ರೆಸ್ ಅಭ್ಯರ್ಥಿ ಗೋಪಾಲಸ್ವಾಮಿ ಅವರು ಕಳೆದ ಬಾರಿ ಎಂಎಲ್ಸಿಯಾಗಿದ್ದರು. ಇವರು ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲ ಇರುವುದು ಚುನಾವಣೆಯಲ್ಲಿ ಸಹಾಯವಾಗುವ ಸಾಧ್ಯತೆಯಿದೆ. ಇನ್ನೂ ಮೈನಸ್ ಪಾಯಿಂಟ್ ನೋಡುವುದಾದರೇ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದಿಲ್ಲ. ಜೊತೆಗೆ ಖಡಕ್ ನಡೆ ಇಲ್ಲದೇ ಇರುವುದು ಇವರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಪಕ್ಷದೊಳಗಿನ ಬಂಡಾಯ ಎದ್ದಿರುವುದು ಇವರಿಗೆ ಹಿನ್ನಡೆಯಾಗುತ್ತದೆ.
ಚಿದಾನಂದ: ಬಿಜೆಪಿ ಅಭ್ಯರ್ಥಿ ಚಿದಾನಂದ ಅವರು ಇನ್ನೂ ಯುವಕರಾಗಿರುವುದು ಇವರಿಗೆ ಪ್ಲಸ್ ಆಗಿದೆ. ಅಷ್ಟೇ ಅಲ್ಲದೇ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಹೊಸ ಮುಖವಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಗೆಲುವಿಗೆ ಸಹಕಾರಿಯಾಗುವ ಸಾಧ್ಯತೆಯಿದೆ. ಇನ್ನೂ ಮೈನಸ್ ಹೇಳುವುದಾದರೇ ಅಭ್ಯರ್ಥಿ ಕ್ಷೇತ್ರದಲ್ಲಿ ಪರಿಚಯ ಇಲ್ಲ ಜೊತೆಗೆ ಇಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿಲ್ಲದಿರುವುದು ಮೈನಸ್ ಆಗಿದೆ. ಇದರ ಜೊತೆಗೆ ಪೈಪೋಟಿ ಇಲ್ಲದೆ ಟಿಕೆಟ್ ಪಡೆದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಪ್ರಬಲವಾಗಿರುವುದು ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಜಾತಿ ಲೆಕ್ಕಾಚಾರ ಏನು?:
ಈ ಕ್ಷೇತ್ರದಲ್ಲೂ ಒಕ್ಕಲಿಗ ಮತದಾರರ ಬರೋಬ್ಬರಿ 1,34,000 ಇದ್ದು, ಇವರೇ ನಿರ್ಣಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಪರಿಶಿಷ್ಟ ಜಾತಿ 21,000, ಎಸ್ಟಿ 10,000, ಲಿಂಗಾಯತ ಹಾಗೂ ಕುರುಬ 7,000 ಉಳಿದ ಸಮುದಾಯದವರು ನಾಲ್ಕೈದು ಸಾವಿರದ ಒಳಗಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,12,070. ಇವರಲ್ಲಿ 1,06,029 ಮಂದಿ ಪುರುಷರಿದ್ದರೆ, 1,06,041 ಮಂದಿ ಮಹಿಳೆಯರಿದ್ದಾರೆ.