ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್​ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಸಚಿವ ಆರ್ ಅಶೋಕ ಅವರು ಟೀಕಿಸಿದ್ದಾರೆ. ಗ್ಯಾರಂಟಿ ಕಾರ್ಡುಗಳು ದೋಖಾ ಗ್ಯಾರಂಟಿ ಕಾರ್ಡುಗಳು ಅಂತಾ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಗ್ಯಾರಂಟಿ ಕಾರ್ಡುಗಳು ದೋಖಾ ಗ್ಯಾರಂಟಿ ಕಾರ್ಡುಗಳು ಎಂದು ಮಾಜಿ ಸಚಿವ  ಹೇಳಿದ್ದಾರೆ. ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾತನಾಡಿದ ಅವರು, 2000 ರೂಪಾಯಿಕೊಟ್ಟು ಜನರಿಂದ 4000 ರೂಪಾಯಿ ಕಿತ್ತುಕೊಳ್ಳುತ್ತಿದೆ. 24 ಗಂಟೆಯಲ್ಲಿ ಗ್ಯಾರಂಟಿಗಳನ್ನ ಘೋಷಣೆ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಸರ್ಕಾರ ರಚನೆಯಾಗಿ ಒಂದು ತಿಂಗಳು ಆಗಿದೆ. ಆದರೂ ಸಂಪೂರ್ಣವಾಗಿ ಜಾರಿಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಳ್ಳನಿಗೆ ಒಂದು ಪಿಳ್ಳೆ ನೆವ ಹೇಳಿ ಗ್ಯಾರಂಟಿ ಯೋಜನೆಗಳ ಮುಂದೆ ಹಾಕುತ್ತಿದ್ದಾರೆ. ದುಡ್ಡು ಉಳಿಸುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ‌. ತಡ ಮಾಡಲು ಐಡಿಯಾ ಕೊಟ್ಟಿದ್ದಾರೆ. ಅಕ್ಕಿ ವಿತರಣೆಗೆ ತಡ ಮಾಡಿದರು. 1000 ರೂಪಾಯಿ ಕೋಟಿ ಉಳಿತು. ಸಿಎಂ ಬಸವರಾಜ ಬೊಮ್ಮಾಯಿ ಅಥವಾ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ವಿದ್ಯುತ್ ಬೆಲೆ ಏರಿಕೆ ಮಾಡಿದ್ದರಾ? ಮಾಡಿದ್ದರೆ ತೋರಿಸಿ. ಬೆಲೆ ಏರಿಕೆ ಮಾಡಿದ್ದರೆ ನೀವು ಅದನ್ನು ನಿಲ್ಲಿಸಿ. ಯಾಕೆ ಹೆಚ್ಚಳ ಮಾಡುತ್ತೀರಿ ಎಂದರು.

ಜನರೆ ಸರ್ಕಾರವನ್ನು ಕಿತ್ತು ಒಗಿತಾರೆ: ಅಶೋಕ

ಜನರೆ ರಾಜ್ಯ ಸರ್ಕಾರವನ್ನು ಕಿತ್ತು ಒಗಿತಾರೆ ಎಂದು ಹೇಳಿದ ಅಶೋಕ, ಡರ್ಟಿ ಪಾಲಿಟಿಕ್ಸ್ ಮಾಡುತ್ತಿರುವುದು ಸಿದ್ದರಾಮಯ್ಯ ಅವರ ತಂಡ. ದುಡ್ಡು ಇದೆ ಅಂತೀರಲ್ಲ, ಅಕ್ಕಿಯನ್ನು ಖರೀದಿ ಮಾಡಿ ಜನರಿಗೆ ವಿತರಿಸಿ. ಅಕ್ಕಿ ಕೊಡಲು ಸಾಧ್ಯವಾಗುವುದಿಲ್ಲ ಎಂದರೆ ಅದರ ಹಣ ಜನರ ಬ್ಯಾಂಕ್ ಖಾತೆಗೆ ಹಾಕಿ ಎಂದರು.

ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಲೋಡ್ ಶೆಡ್ಡಿಂಗ್ ಇರಲಿಲ್ಲ. ಇದೀಗ ಬೆಂಗಳೂರಿನಲ್ಲೂ ಲೋಡ್ ಶೆಡ್ಡಿಂಗ್ ಮಾಡಿಸುತ್ತಿದ್ದಾರೆ ಎಂದು ಹೇಳಿದ ಮಾಜಿ ಸಚಿವರು, ಈಗ ನಂದಿನಿ ಹಾಲಿನ ದರವನ್ನೂ ಹೆಚ್ಚಳ ಮಾಡುತ್ತೇನೆ ಅಂತಿದ್ದಾರೆ. ದರಿದ್ರ ಸರ್ಕಾರ ಬಂದ ಮೇಲೆ‌ ಮಳೆಯೂ ಹಿಂದೆ ಹೋಯಿತು. ಕೆಆರ್​ಎಸ್​ ಖಾಲಿಯಾಗಿ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತಿದೆ ಎಂದರು.

ಉಚಿತ ಪ್ರಯಾಣ ಜಾರಿಗೂ ಮುನ್ನ ಯೋಚನೆ ಮಾಡಬೇಕಿತ್ತು ಎಂದು ಹೇಳಿದ ಅಶೋಕ, ಆಟೋ, ಖಾಸಗಿ ಬಸ್​ನವರು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ಒಳ್ಳೇದು ಏನು, ಕೆಟ್ಟದ್ದು ಏನು ಅಂತಾ ಯೋಚನೆ ಮಾಡಬೇಕಿತ್ತು. ಮತಕ್ಕಾಗಿ ಫ್ರೀ ಫ್ರೀ ಅಂತಾ ಕಾಂಗ್ರೆಸ್​ನವರು ಭಾಷಣ ಮಾಡಿದರು. ಕಾಂಗ್ರೆಸ್ ಗ್ಯಾರಂಟಿಗಳೆಲ್ಲವೂ ಬೋಗಸ್. ಡೋರ್ ಕಿತ್ತಾಕಿ ಒಳಗೆ ನುಗ್ಗುವ ಯೋಜನೆ ಬಹಳ ದಿನ ಉಳಿಯಲ್ಲ. ಗ್ಯಾರಂಟಿ ಯೋಜನೆ ಲೋಕಸಭೆ, BBMP ಚುನಾವಣೆವರೆಗೂ ಮಾತ್ರ ಇರಲಿದೆ ಎಂದರು.

ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ: ಆರ್ ಅಶೋಕ

ಕಾಂಗ್ರೆಸ್ಸಿಗರು ಮೋಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಈಗ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ವರ್ಗಾವಣೆಯಲ್ಲೂ ಹಣ ವಸೂಲಿ ಮಾಡುತ್ತಿದ್ದಾರೆ. ದುಡ್ಡು ಇಲ್ಲದೆ ಕಾಂಗ್ರೆಸ್ ನಾಯಕರು ಯಾವ ಕೆಲಸ ಮಾಡಲ್ಲ. ಲೋಕಸಭೆಯಲ್ಲಿ 25 ಸೀಟುಗಳನ್ನು ಗೆಲ್ಲುವ ಮೂಲಕ ಸರ್ಕಾರಕ್ಕೆ ಮೋಸದ ಗ್ಯಾರಂಟಿ ಅಂತ ಪ್ರೂವ್ ಮಾಡಬೇಕು. ಇವರಿಗೆ ಮೋದಿ, ಅಮಿತ್ ಶಾ ಆಗ ಚಳಿ ಬಿಡಿಸುತ್ತಾರೆ ಎಂದರು.

ಕಾಂಗ್ರೆಸ್ ನಾಯಕರಿಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇರಲಿಲ್ಲ. ಗೆಲ್ಲುವ ನಂಬಿಕೆ ಇದ್ದಿದ್ದರೆ ಗ್ಯಾರಂಟಿ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದ ಮಾಜಿ ಸಚಿವರು, ಅತಂತ್ರ ಬಂದರೆ ಜೆಡಿಎಸ್ ಜೊತೆ ಸರ್ಕಾರ ಮಾಡೋಣ ಅಂದುಕೊಂಡಿದ್ದರು. ಆದರೆ ಜೆಡಿಎಸ್​ಗೆ ಬರುವ ಮತ ಕಾಂಗ್ರೆಸ್​​ಗೆ ಶಿಫ್ಟ್​​ ಆಯಿತು ಎಂದರು.

Leave a Reply

Your email address will not be published. Required fields are marked *