ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಮಧು ಬಂಗಾರಪ್ಪ

ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಮಧು ಬಂಗಾರಪ್ಪ

ಪ್ರಸಕ್ತ ಸಾಲಿನಲ್ಲಿ ರಾಜ್ಯದ 25,000 ಶಿಕ್ಷಕರು ವರ್ಗಾವಣೆ ಆಗಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದ್ದು, ನೀಗಿಸಲು ಸ್ಥಳೀಯ ಜಲಮೂಲಗಳನ್ನು ಬಳಸಿಕೊಳ್ಳುವಂತೆ ಹಾಗೂ ಅಗತ್ಯವಿರುವಲ್ಲಿ‌ ಟ್ಯಾಂಕರ್​ಗಳ ಮೂಲಕ ನೀರನ್ನು ಸರಬರಾಜು ಮಾಡುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಬಳಿಕ ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆಗೆ ಸುಮಾರು 87,000 ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 25,000 ಶಿಕ್ಷಕರು ವರ್ಗಾವಣೆಯಾಗಲಿದ್ದಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಈ ಪ್ರಕ್ರಿಯೆ ನಡೆಯಲಿದೆ ಎಂದರು.

ರಾಜ್ಯದಲ್ಲಿ ಸುಮಾರು 57,000 ಶಿಕ್ಷಕರ ಹುದ್ದೆ ಖಾಲಿ‌ ಇದ್ದು, ತಕ್ಷಣದ ಕ್ರಮವಾಗಿ ಹಾಗೂ ನ್ಯಾಯಾಲಯದ ಸೂಚನೆಯಂತೆ 13,000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ. ಈ ಶಿಕ್ಷಕರ ನೇಮಕಾತಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ನೇಮಕಗೊಳ್ಳುತ್ತಿರುವುದು ವಿಶೇಷ. ಅಲ್ಲದೇ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಗ್ರಾಮೀಣ ಶಾಲೆಗಳ ಸಮಸ್ಯೆಯನ್ನು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಪೋಷಕರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಮತ್ತು ಅಧಿಕಾರಿಗಳ ಸಲಹೆ ಪಡೆದು ಸರಿಪಡಿಸಲು ಯತ್ನಿಸಲಾಗುವುದು.

ಬಿಸಿಯೂಟದಲ್ಲಿ ಸ್ವಚ್ಛತೆಗೆ ಸೂಚನೆ : ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ, ಬಿಸಿಯೂಟ ಕಾರ್ಯಕ್ರಮ ಅನುಷ್ಠಾನದಲ್ಲಿ ಸ್ವಚ್ಚತೆ ಕಾಪಾಡುವಂತೆ ಶಿಕ್ಷಣಾಧಿಕಾರಿಗಳಿಗೆ‌ ಸೂಚಿಸಿದ ಸಚಿವರು ಅರಣ್ಯಭೂಮಿಯಲ್ಲಿ ರೈತರು ಬೆಳೆದ ಬೆಳೆ ನಾಶಪಡಿಸದಂತೆ ಹಾಗೂ ಅವರನ್ನು ಒಕ್ಕಲೆಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಸಂತ್ರಸ್ಥರ ನೆರವಿಗೆ ಧಾವಿಸಬೇಕು : ಮಳೆಹಾನಿ ಸಂದರ್ಭಗಳಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಮಾನವೀಯ ನೆಲೆಯಲ್ಲಿ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನಾ ಮಾತನಾಡಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ಮಧು ಬಂಗಾರಪ್ಪ ಹೊಸದಾಗಿ ಮಂತ್ರಿ ಸ್ಥಾನವನ್ನು ವಹಿಸಿಕೊಂಡು ಜಿಲ್ಲಾ ಮಂತ್ರಿಗಳಾಗಿದ್ದಾರೆ. ಮಂತ್ರಿಯಾದ ತಕ್ಷಣ ಎಲ್ಲವನ್ನು ಸರಿ‌ ಮಾಡಲು ಆಗಲ್ಲ, ಮೂರು ನಾಲ್ಕು ತಿಂಗಳ‌ ಕಾಲಾವಕಾಶ ಬೇಕಾಗುತ್ತದೆ. ಇದರಿಂದ ಮುಂದೆ ಉತ್ತಮವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು. ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *