ಚಾಮರಾಜನಗರದಲ್ಲಿ ಮದ್ಯದೊಂದಿಗೆ ವಿಷ ಸೇವಿಸಿ ಪ್ರಾಣ ಸ್ನೇಹಿತರ ಆತ್ಮಹತ್ಯೆ ಯತ್ನ; ಓರ್ವ ಸಾವು, ಮತ್ತೋರ್ವ ಗಂಭೀರ
ಗೆಳೆಯರಿಬ್ಬರು ಮದ್ಯದ ಜೊತೆ ವಿಷ ಸೇವಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ: ಇಬ್ಬರು ಆತ್ನೀಯ ಸ್ನೇಹಿತರು ಮದ್ಯದ ಜೊತೆಗೆ ವಿಷದ ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ನಿನ್ನೆ (ಗುರುವಾರ) ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮನು (19) ಹಾಗೂ ಇತ್ತಲದೊಡ್ಡಿ ಗ್ರಾಮದ ಆನಂದ್ ಅಲಿಯಾಸ್ ನಾಗೇಂದ್ರ (19) ಆತ್ಮಹತ್ಯೆಗೆ ಯತ್ನಿಸಿದವರು. ಇವರಲ್ಲಿ ನಾಗೇಂದ್ರ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮನು ಎಂಬಾತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ನಾಗೇಂದ್ರ ಹಾಗೂ ಮನು ಪ್ರಾಣ ಸ್ನೇಹಿತರು. ಜೊತೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದರು. ನಾಗೇಂದ್ರನ ಕೈಯಲ್ಲಿ ಮನು ಎಂಬ ಹೆಸರು ಹಾಗೂ ಮನು ಕೈಯಲ್ಲಿ ನಾಗೇಂದ್ರ ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಇಬ್ಬರ ಸ್ನೇಹ ಸಂಬಂಧ ನೋಡಿ ಗ್ರಾಮದವರೇ ಇವರನ್ನು ಆಪ್ತಮಿತ್ರರು ಎಂದೇ ಕರೆಯುತ್ತಿದ್ದರು. ನಾಗೇಂದ್ರರ ತಂದೆ- ತಾಯಿ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಬೇಸತ್ತ ನಾಗೇಂದ್ರ ನನಗೆ ಅಪ್ಪ ಅಮ್ಮ ಯಾರೂ ಇಲ್ಲ. ನಾನು ಜೀವನದಲ್ಲಿ ಬದುಕಿದ್ದರೂ ಸಹ ಪ್ರಯೋಜನವಿಲ್ಲ. ಬದುಕುವುದು ವ್ಯರ್ಥ ಎಂದು ಆಗಾಗ ಹೇಳುತ್ತಿದ್ದನಂತೆ.
ಇದರಿಂದ ಬೇಸತ್ತು ಇಬ್ಬರೂ ಸಹ ಕೊಳ್ಳೇಗಾಲ ತಾಲೂಕಿನ ಲಕ್ಕರಸನ ಪಾಳ್ಯ ಗ್ರಾಮದ ರಸ್ತೆಯಲ್ಲಿ ಮದ್ಯದ ಜೊತೆಗೆ ವಿಷ ಸೇವಿಸಿದ್ದು, ರಸ್ತೆಯಲ್ಲಿಯೇ ಜೀವನ್ಮರಣದ ಮಧ್ಯೆ ಒದ್ದಾಡುತ್ತಿದ್ದರು. ನೋಡಿದ ಸ್ಥಳೀಯರು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಾಗೇಂದ್ರ ಸಾವನ್ನಪ್ಪಿದ್ದಾನೆ. ಮನು ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಯಭಾಗದಲ್ಲಿ ಪತ್ನಿ ಕೊಂದು ಪತಿ ಆತ್ಮಹತ್ಯೆ: ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಲೆಗೈದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿಯ ಉಪ್ಪರವಾಡಿ ಎಂಬಲ್ಲಿ ಗುರುವಾರ ನಡೆದಿತ್ತು. ಉಪ್ಪರವಾಡಿ ಗಲ್ಲಿಯ ಉಷಾ ಖೋತ (29) ಮೃತ ಮಹಿಳೆಯಾಗಿದ್ದು, ಧರೆಪ್ಪ ಖೋತ ಎಂಬಾತನೆ ಹತ್ಯೆ ಮಾಡಿದ ಆರೋಪಿ ಪತಿಯಾಗಿದ್ದಾನೆ.
ಉಷಾ ಮನೆಯಲ್ಲಿ ಮಲಗಿದ್ದಾಗ ಆರೋಪಿ ಧರೆಪ್ಪ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಅದೇ ಕೊಠಡಿಯಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. 11 ವರ್ಷಗಳ ಹಿಂದೆ ಧರೆಪ್ಪ ಹಾಗೂ ಉಷಾ ಮದುವೆ ಆಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುತ್ತಿದ್ದ ಧರೆಪ್ಪ ದಿನಾಲೂ ಮದ್ಯ ಸೇವನೆ ಮಾಡುತ್ತಿದ್ದ. ಹೀಗಾಗಿ ಗಂಡ – ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.