ಕಲಬುರಗಿಯ ಜನನಿಬಿಡ ಪ್ರದೇಶದಲ್ಲಿಯೇ ದುಷ್ಕರ್ಮಿಗಳು ಮಧ್ಯಾಹ್ನದ ಸಮಯದಲ್ಲಿಯೇ ಓರ್ವ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವಂತಹ ಘಟನೆ ಇಕ್ಬಾಲ್ ಕಾಲೋನಿಯಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಯುವಕನಿಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು: ದೂರು ದಾಖಲು

ಚಾಕು ಇರಿತಕ್ಕೊಳಗಾದ ಯುವಕ ಮಹ್ಮದ್ ಹಸನ್

ಕಲಬುರಗಿ: ಗಾಂಜಾ ಮತ್ತು ಕುಡಿತದ ಮತ್ತಿನಲ್ಲಿ ಹಾಡಹಗಲೇ ಕೊಲೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿಮೀರಿದೆ. ದುಷ್ಕರ್ಮಿಗಳಿಗೆ ಕಾನೂನು ಮತ್ತು ಪೊಲೀಸರ ಮೇಲೆ ಭಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅನೇಕ ಅಹಿತಕರ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಂದು ಕೂಡ ಜನನಿಬಿಡ ಪ್ರದೇಶದಲ್ಲಿಯೇ ದುಷ್ಕರ್ಮಿಗಳು ಮಧ್ಯಾಹ್ನದ ಸಮಯದಲ್ಲಿಯೇ ಚಾಕುವಿನಿಂದ ಇರಿದು (stabbed) ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೊಳಗಾದ ಯುವಕ, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ.

ಕಲಬುರಗಿ ನಗರದ ಇಕ್ಬಾಲ್ ಕಾಲೋನಿಯಲ್ಲಿ ಯುವಕನ ಮೇಲೆ ಇಬ್ಬರು ಪುಡಿ ರೌಡಿಗಳು ಚಾಕುವಿನಿಂದ ಇರಿದಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿಯೇ ಹೊಟೆಲ್ ಮುಂದೆ ನಿಂತಿದ್ದ ಮಹ್ಮದ್ ಹಸನ್​ಗೆ ಚಾಕು ಇರಿದಿದ್ದಾರೆ. ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಹಸನ್​ ಇಂದು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ. ಮಧ್ಯಾಹ್ನದ ಮನೆಯ ಸಮೀಪದಲ್ಲಿಯೇ ಇರುವ ಹೋಟೆಲ್ ಬಳಿ ಸ್ನೇಹಿತರ ಜೊತೆ ನಿಂತಿದ್ದ. ಈ ಸಮಯದಲ್ಲಿ ಮಹ್ಮದ್ ಹಸಸ್​ಗೆ ಪರಿಚಿತರಿರುವ ಇಬ್ಬರು ಯುವಕರು ಬಂದು ಚಾಕುವಿನಿಂದ ಎದೆ ಸೇರಿದಂತೆ ದೇಹದ ವಿವಿಧಡೆ ಇರಿದು ಪರಾರಿಯಾಗಿದ್ದಾರೆ.

ಚಾಕು ಇರಿತಕ್ಕೆ ಕಾರಣ ನಿಗೂಢ

ಮಹ್ಮದ್ ಹಸನ್​ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದಾತ. ಯಾರ ಜೊತೆ ವೈಷಮ್ಯವನ್ನು ಹೊಂದಿರಲ್ಲವಂತೆ. ಆದರೆ ಹಾಡಹಗಲೇ ದುಷ್ಕರ್ಮಿಗಳು ಯಾರ ಅಂಜಿಕೆ, ಅಳುಕಿಲ್ಲದೆ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮಹ್ಮದ್ ಹಸನ್ ಮೇಲೆ ಚಾಕುವಿನಿಂದ ದಾಳಿ ಮಾಡಿದಾಗ, ಮಹ್ಮದ್ ಹಸನ್ ಸ್ನೇಹಿತರು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅವರ ಮೇಲೆ ಕೂಡಾ ಚಾಕುವಿನಿಂದ ದಾಳಿ ಮಾಡಲು ಮುಂದಾಗಿದ್ದರಿಂದ ಅವರು ಓಡಿ ಹೋಗಿದ್ದಾರೆ.

ಆದರೆ ದುಷ್ಕರ್ಮಿಗಳು ಪರಾರಿಯಾದ ನಂತರ, ಸ್ನೇಹಿತರೇ, ಮಹ್ಮದ್ ಹಸನ್​ನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಎದೆ ಭಾಗ ಸೇರಿದಂತೆ ಅನೇಕ ಕಡೆ ಇರದಿದ್ದರಿಂದ, ಮಹ್ಮದ್ ಹಸನ್, ಆರೋಗ್ಯ ಗಂಭೀರವಾಗಿದ್ದು, ತೀರ್ವ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಮಹ್ಮದ್ ಹಸನ್ ಮೇಲೆ ಚಾಕುವಿನಿಂದ ಇರಿದ ಘಟನೆ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *