ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಡಿಕೆ ಶಿವಕುಮಾರ್
ಬೆಂಗಳೂರು: ಅಕ್ಕಿ ಖರೀದಿ ಬಗ್ಗೆ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಜೋರಾಗಿದ್ದು, ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನಿಡಿದೆ. ಜೂನ್ 20ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ. ಈ ಬಗ್ಗೆ ಇಂದು(ಜೂನ್ 16) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮೊದಲು ಅಕ್ಕಿ ಕೊಡುತ್ತೇವೆಂದಿದ್ದ FCI ನಂತರ ಸಾಧ್ಯವಿಲ್ಲವೆಂದು ಪತ್ರ ಬರೆದಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಇದು ಉದಾಹರಣೆಯಾಗಿದೆ. ಭಾರತೀಯ ಜನತಾ ಪಕ್ಷ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ಬಿಜೆಪಿ ಬಡವರಿಗೆ ದ್ರೋಹ ಮಾಡುವ ಪಾರ್ಟಿ. ಭಾರತೀಯ ಜನತಾ ಪಕ್ಷದ ನಿರ್ಧಾರಕ್ಕೆ ನಾವು ಧಿಕ್ಕಾರ ಹೇಳಬೇಕು. ಹೀಗಾಗಿ ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಜನರ ಮುಂದೆ ಇಟ್ಟಿದ್ದೇವೆ. ಗ್ಯಾರಂಟಿ ಅನುಷ್ಠಾನಕ್ಕೆ ಬರುತ್ತೋ ಇಲ್ವೋ ಅಂತಾ ಚರ್ಚೆ ಮಾಡುತ್ತಿದ್ದಾರೆ. ವಿಪಕ್ಷ ನಾಯಕರು ಟೀಕೆ ಟಿಪ್ಪಣಿ ಮಾಡಿಕೊಂಡು ಬಂದಿದ್ದಾರೆ. ಮೊದಲ ಸಂಪುಟದಲ್ಲೇ ತಾತ್ವಿಕ ಒಪ್ಪಿಗೆ ನೀಡಿ ಬದ್ಧತೆ ತೋರಿಸಿದ್ದೇವೆ. ಎರಡನೇ ಕ್ಯಾಬಿನೆಟ್ನಲ್ಲಿ ಟೈಮ್ ಲೈನ್ ಕೂಡ ನಿಗದಿ ಮಾಡಿದ್ದೇವೆ. ಇದರೊಂದಿಗೆ ನುಡಿದಂತೆ ನಡೆಯುತ್ತಿದ್ದೇವೆ. ವಿಪಕ್ಷ ನಾಯಕರು ಏನೇ ಚರ್ಚೆ ಮಾಡಿದರೂ ಉತ್ತರಿಸಲು ತಯಾರಿಲ್ಲ/ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.