ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ರೀತಿ ನಕಲಿ ಫೋಟೊ ಅಥವಾ ವೀಡಿಯೊ ಬಳಸಿದವರಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂ ದಂಡ ವಿಧಿಸಲು ಚಿಂತನೆ ನಡೆಸಿದೆ.
ಲಂಡನ್ ಮತ್ತು ಭಾರತ ಮೂಲದ ಯೂಟ್ಯೂಬರ್ ಪ್ರಭಾವಿ ನಟಿಯೊಬ್ಬರ ವೀಡಿಯೊಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
ನಕಲಿ ವೀಡಿಯೊ ಬಗ್ಗೆ ಸ್ವತಃ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹಾಗೂ ಸ್ಟಾರ್ ನಟರು ಆತಂಕ ವ್ಯಕ್ತಪಡಿಸಿದ್ದರು. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಇದೀಗ ಈ ರೀತಿ ನಕಲಿ ವೀಡಿಯೊ ಮಾಡಿದವರಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸುವ ಪ್ರಸ್ತಾಪ ಮುಂದಿಟ್ಟಿದೆ.
ಇದಕ್ಕೂ ಮುನ್ನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನಕಲಿ ವೀಡಿಯೊ ಮಾಡಿದರೆ ಅಂತಹವರ ಸಾಮಾಜಿಕ ಜಾಲತಾಣದ ಖಾತೆಗಳನ್ನು 36 ಗಂಟೆಯಲ್ಲಿ ನಿರ್ಬಂಧಿಸಲಾಗುವುದು ಎಂದು ಹೇಳಿದ್ದರು.