ಮಧ್ಯಪ್ರದೇಶದ ಭೋಪಾಲ್ನಲ್ಲಿ ಶ್ವಾನ ತರಬೇತಿ ಕೇಂದ್ರದ ನೌಕರರು ನಾಯಿಯನ್ನು ನೇಣಿಗೆ ಹಾಕಿ ಕೊಂದಿರುವ ಭೀಕರ ಘಟನೆ ನಡೆದಿದೆ. ಇಬ್ಬರು ಉದ್ಯೋಗಿಗಳು ನಾಯಿಯನ್ನು ಗೇಟಿಗೆ ನೇಣು ಹಾಕಿದ್ದು, ಇನ್ನೋರ್ವ ನಾಯಿಯ ಕುತ್ತಿಗೆಗೆ ಸರಪಳಿಯಿಂದ ಬಿಗಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಆಪರೇಟರ್ ರವಿ ಕುಶ್ವಾಹ ಮತ್ತು ಮಹಿಳೆ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಕ್ಷ್ಯ ನಾಶವನ್ನು ಮಾಡಲೂ ಅವರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಧ್ಯಪ್ರದೇಶದ ಶಾಜಾಪುರದ ಉದ್ಯಮಿ ನಿಖಿಲ್ ಜೈಸ್ವಾಲ್ ಸುಮಾರು ಎರಡು ವರ್ಷಗಳ ಹಿಂದೆ ನಾಯಿಯನ್ನು ಖರೀದಿಸಿ ಮೇ ತಿಂಗಳಲ್ಲಿ ತರಬೇತಿ ಕೇಂದ್ರಕ್ಕೆ ನಾಯಿಯನ್ನು ಸೇರಿಸಿದ್ದರು. ತರಬೇತಿಯು ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, ತಿಂಗಳಿಗೆ 13,000 ರೂ.ಗಳ ಶುಲ್ಕವನ್ನು ತರಬೇತಿ ಕೇಂದ್ರವು ವಿಧಿಸಿತ್ತು.
ಆದರೆ, ಅಕ್ಟೋಬರ್ 9 ರಂದು ನಾಯಿ ಮಾಲೀಕ ನಿಖಿಲ್ ಅವರಿಗೆ ಕರೆ ಮಾಡಿದ್ದ ತರಬೇತಿ ಕೇಂದ್ರದ ಸಿಬ್ಬಂದಿಗಳು ಅನಾರೋಗ್ಯದಿಂದ ನಾಯಿ ಸಾವನ್ನಪ್ಪಿದೆ ಎಂದು ಹೇಳಿದ್ದರು. ಆದರೆ, ನಿಖಿಲ್ ಅವರಿಗೆ ಸಂದೇಹ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಆಘಾತಕಾರಿ ಘಟನೆ ಬಯಲಿಗೆ ಬಂದಿದೆ. ಪೊಲೀಸ್ ತನಿಖೆಯ ಸಮಯದಲ್ಲಿ, ಸೈಬರ್ ಸೆಲ್ ಸಹಾಯದಿಂದ ಸಿಸಿಟಿವಿ ದೃಶ್ಯಗಳನ್ನು ಸಹ ಸಂಗ್ರಹಿಸಲಾಗಿದೆ.