ಲಕ್ನೋ: ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ (Pistol) ಬಳಸಿ ತಾಯಿಯನ್ನು ಕೊಂದಿದ್ದ ಅಪ್ರಾಪ್ತ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಇತ್ತೀಚೆಗೆ ಜಾಮೀನು (Bail) ಮಂಜೂರು ಮಾಡಿದೆ.
ಆರೋಪಿಯು ಅಪ್ರಾಪ್ತನಾಗಿದ್ದು, ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಪರಿಗಣಿಸಿದ ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ನೀಡಿದೆ.
ಈಗ ಇರುವ ಯಾವ ಸಾಕ್ಷಿಗಳೂ ಸೂಕ್ತವಾಗಿಲ್ಲ. ಪ್ರಕರಣದಲ್ಲಿ ಆರೋಪಿಯ ಅಜ್ಜಿ ದೂರು ದಾಖಲಿಸಿದ್ದು, ಅವರು ಪ್ರತ್ಯಕ್ಷ ಸಾಕ್ಷಿಯಲ್ಲ. ಇನ್ನುಳಿದ ಸಾಕ್ಷಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿಲ್ಲ. ಕೇವಲ ಆರೋಪಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಆರೋಪಿಗೆ ಘಟನೆ ನಡೆದಾಗ 16 ವರ್ಷ. ಇದು ಬಾಲ ನ್ಯಾಯ ಮಂಡಳಿಯ ದೋಷಾರೋಪ ಪಟ್ಟಿಯಲ್ಲಿಯೂ ಸ್ಪಷ್ಟವಾಗಿದೆ. ಇದರಿಂದಾಗಿ ಆತನನ್ನು ಅಪ್ರಾಪ್ತ ಎಂದು ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಿ ಆತನನ್ನು ಬಂಧಿಸಲಾಗಿತ್ತು. ಆರೋಪಿ ಜಾಮೀನಿಗಾಗಿ ಜಿಲ್ಲಾ ನ್ಯಾಯಲಯದ ಮೊರೆ ಹೋಗಿದ್ದ. ಆದರೆ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆರೋಪಿ, ಲಕ್ನೋದ (Lucknow) ಪೋಕ್ಸೊ ನ್ಯಾಯಾಲಯದ (POCSO Court) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (Additional District & Sessions Court) ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ಏನಾಗಿತ್ತು?
ಜೂನ್ 2022 ರಲ್ಲಿ ಪಬ್ಜಿ ಆಡುವುದನ್ನು ತಡೆದ ಕಾರಣಕ್ಕಾಗಿ ಆರೋಪಿ ತಾಯಿಯನ್ನು ಕೊಲೆಗೈದಿದ್ದ ಎಂದು ಆರೋಪಿಸಲಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಮೃತರ ಶವ ಪತ್ತೆಯಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆರೋಪಿಯು ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ ಹಾಗೂ ಅಪರಾಧ ಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಮನವರಿಕೆಯಾದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಯು ಜೂನ್ 8, 2022 ರಿಂದ ಬಾಲಾಪರಾಧಿಗಳ ರಕ್ಷಣಾ ಗೃಹದಲ್ಲಿದ್ದಾನೆ (Child Protection Home). ಅವನ ತಂದೆ ತನ್ನ ಮಗನ ಮೇಲೆ ನಿಗಾ ಇಡುತ್ತಾರೆ ಎಂಬ ಅಂಶವನ್ನು ಸಹ ನ್ಯಾಯಾಲಯ ಉಲ್ಲೇಖಿಸಿದೆ.