ಕಳೆದ ಮಾರ್ಚ್, ಎಪ್ರಿಲ್, ಮೇ ಹಾಗೂ ಜೂನ್ ಸೇರಿ 4 ತಿಂಗಳಿನಿಂದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ಸಂಬಳ ನೀಡದೇ ಉಚಿತ ಸೇವೆ ಮಾಡಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆ ಸಿಬ್ಬಂದಿಗಳು ಜುಲೈ 7 ರವರೆಗೂ ಆರೋಗ್ಯ ಇಲಾಖೆಗೆ ಡೆಡ್ಲೈನ್ ನೀಡಿದ್ದಾರೆ.
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಜನರಿಗೆ ಅಪಘಾತ ಸೇರಿದಂತೆ ಎಲ್ಲಾ ಅವಘಡಗಳಲ್ಲೂ ಆ್ಯಂಬುಲೆನ್ಸ್(ambulance) ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಸ್ಥಳಕ್ಕೆ ಬಂದು, ಅದೆಷ್ಟೋ ಪ್ರಾಣವನ್ನ ಉಳಿಸುವ ಮಹತ್ವದ ಕೆಲಸ ಮಾಡುವ108 ಆ್ಯಂಬುಲೆನ್ಸ್ ನೌಕರರ ವೇತನದ ಸಮಸ್ಯೆ ಮುಗಿಯುವ ಹಾಗೇ ಕಾಣುತ್ತಿಲ್ಲ. ಕಳೆದ ಮಾರ್ಚ್, ಎಪ್ರಿಲ್, ಮೇ ಹಾಗೂ ಜೂನ್ ಸೇರಿ 4 ತಿಂಗಳಿನಿಂದ ಸಂಬಳ ನೀಡದೇ ಉಚಿತ ಸೇವೆ ಮಾಡಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆ ಸಿಬ್ಬಂದಿಗಳು ಜುಲೈ 7 ರವರೆಗೂ ಆರೋಗ್ಯ ಇಲಾಖೆಗೆ ಡೆಡ್ಲೈನ್ ನೀಡಿದ್ದಾರೆ. ಅಷ್ಟರೊಳಗಾಗಿ ಜಿವಿಕೆ ಸಂಸ್ಥೆ ಬಾಕಿ ಸಂಬಳವನ್ನು ಕೊಡಬೇಕು ಎಂದು ತಾಕೀತು ಹಾಕಿದ್ದು, ಜುಲೈ 7 ರಷ್ಟರಲ್ಲಿ ಸಂಬಳ ನೀಡದೆ ಹೋದರೆ, ಜುಲೈ 8 ರಂದು ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಲು ನೌಕರರು ನಿರ್ಧಾರ ಮಾಡಿದ್ದಾರೆ.
ಈ ಆ್ಯಂಬುಲೆನ್ಸ್ ಸಿಬ್ಬಂದಿಗಳು ಪ್ರತಿಯೊಂದಕ್ಕೂ ಹೋರಾಟ ಮಾಡಿಯೇ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರೇ ತಪ್ಪಾಗಲಾರದು. ಹೌದು ಕಳೆದ 2022ರ ನವಂಬರ್ನಲ್ಲಿ ರಾಜ್ಯ ಸರ್ಕಾರ ಆ್ಯಂಬುಲೆನ್ಸ್ ನೌಕರರ ವೇತನ ಹೆಚ್ಚಿಸಲು ಜಿವಿಕೆ ಕಂಪನಿಗೆ ಹಣ ಬಿಡುಗಡೆ ಮಾಡಿತ್ತು. ಆಗಲು ಕೂಡ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ್ತಿಲ್ಲ ಎನ್ನುವ ಹಾಗೇ ಆಗಿತ್ತು. ಆಗಲೂ ಕೂಡ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು.
ಇದಷ್ಟೇ ಅಲ್ಲ ಜಿವಿಕೆ ಕಂಪನಿಯು ಸತತ14 ವರ್ಷಗಳಿಂದ ನಿರಂತರವಾಗಿ ಸಿಬ್ಬಂದಿಯ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದಿದೆ. ರಾಜ್ಯ ಸರ್ಕಾರ ಸಂಬಳ ಹೆಚ್ಚಳಕ್ಕೆ ಬಿಡುಗಡೆ ಮಾಡಿದರೂ ಹೈದ್ರಾಬಾದ್ ಹೆಡ್ ಆಫೀಸ್ ನಿಂದ ಅನುಮತಿ ಬೇಕು ಅಂದರೆ ಹೇಗೆ?,.ಹಾಗಾಗಿ, ಕೂಡಲೇ ರಾಜ್ಯ ಸರ್ಕಾರ ಈ ಕಂಪನಿಯನ್ನು ವಜಾ ಮಾಡಲಿ, ನಾವು ಮೂರು ತಿಂಗಳ ಕಾಲ ಉಚಿತ ಸೇವೆ ನೀಡಲು ತಯಾರಿದ್ದೇವೆ ಎಂದು 108 ನೌಕರರ ಸಂಘದ ಉಪಾಧ್ಯಕ್ಷ ಎನ್ ಹೆಚ್ ಪರಮಶಿವ ಅವರು ಹೇಳಿದ್ದರು. ಇದೀಗ ಮತ್ತೆ ಸಂಬಳ ಕುರಿತು ಹೋರಾಟಕ್ಕೆ ಇಳಿಯಲು ಸಿದ್ದರಾಗಿದ್ದಾರೆ.