ಮಕ್ಕಳ ವಿವಾಹಕ್ಕೆ ಹೊರಟಿದ್ದ ತಂದೆ ಅಪಘಾತದಲ್ಲಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಮಕ್ಕಳ ವಿವಾಹಕ್ಕೆ ಹೊರಟಿದ್ದ ತಂದೆ ಅಪಘಾತದಲ್ಲಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಪುತ್ರಿಯರ ವಿವಾಹಕ್ಕೆ ಓಡಾಡಿ ತಯಾರಿ ಮಾಡಿದ್ದ ಅಪ್ಪನೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಸಾಗರ ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮದುವೆ ಮನೆಯಲ್ಲಿ ಸೂತಕದ ಛಾಯೆ

ಶಿವಮೊಗ್ಗ : ಕಲ್ಯಾಣ ಮಂಟಪದ ಕಡೆ ಹೊರಟಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಅವರಿಸಿರುವ ಘಟನೆ ಸಾಗರ ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶಿರಸಿಯ ಬನವಾಸಿಯ ಮಂಜುನಾಥ ಗೌಡ (64) ಎಂಬುವರ ಇಬ್ಬರ ಹೆಣ್ಣು ಮಕ್ಜಳ ಮದುವೆ ಇಂದು ಸಾಗರ ತಾಲೂಕು ಚೆನ್ನಕೊಪ್ಪದಲ್ಲಿ ನಡೆಯಬೇಕಿತ್ತು. ಅದೇ ಗ್ರಾಮದ ಸಣ್ಣ ಕಲ್ಯಾಣ ಮಂದಿರದಲ್ಲಿ ಮದುವೆ ಏರ್ಪಡಿಸಲಾಗಿತ್ತು. ಮದುವೆಗೆ ಹೊರಟ ಮಂಜುನಾಥ ಗೌಡ, ರಸ್ತೆ ದಾಟುವಾಗ ಸಾಗರ ಕಡೆಯಿಂದ ಶಿವಮೊಗ್ಗ ಮಾರ್ಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಂಜುನಾಥ ಗೌಡರ ಪತ್ನಿ ಸಹ ಕಳೆದ ಮೂರು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದಾಗಿ, ಅವರ ಮಾವನ ಮನೆಯಲ್ಲಿ ಇಬ್ಬರು ಹೆಣ್ಣು‌ಮಕ್ಕಳನ್ನು ಇಟ್ಟುಕೊಂಡು ಓದಿಸುತ್ತಿದ್ದರು. ಇಬ್ಬರು ಹೆಣ್ಣು‌ಮಕ್ಕಳ ಮದುವೆಯನ್ನು ಇಂದು ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ದುರ್ದೈವ ತಂದೆಯೇ ನಿಧನರಾಗಿದ್ದಾರೆ. ಇದರಿಂದ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಣ್ಣು ಮಕ್ಕಳಿಗೆ ಬರಸಿಡಿಲು ಬಡಿದಂತೆ ಆಗಿದೆ. ಒಂದು ಕಡೆ ತಾಯಿ ಇಲ್ಲ, ಈಗ ತಮ್ಮ ಮದುವೆ ನೋಡಬೇಕಾಗಿದ್ದ ತಂದೆ ಸಹ ಸಾವನ್ನಪ್ಪಿರುವುದು ನಿಜಕ್ಕೂ ದುರಂತವೇ ಸರಿ.

“ತಾಯಿ ಸಾವನ್ನಪ್ಪಿದ್ದ ಕಾರಣ ಇಬ್ಬರು ಹೆಣ್ಣು‌ಮಕ್ಕಳನ್ನು ಅವರ ಅಜ್ಜನ ಮನೆಯಲ್ಲಿಯೇ ಇಟ್ಟುಕೊಂಡು ಸಾಕಲಾಗುತ್ತಿತ್ತು. ಅವರ ಮದುವೆಯನ್ನು ಅಜ್ಜನ ಮನೆಯಲ್ಲೇ ನಿಶ್ಚಯಿಸಲಾಗಿತ್ತು. ಆದರೆ, ವಿಧಿಯಾಟದಿಂದ ತಂದೆ ಸಾವನ್ನಪ್ಪಿದ್ದಾರೆ” ಎಂದು ಸಂಬಂಧಿಕರು ದುಃಖದಿಂದ ತಿಳಿಸಿದ್ದಾರೆ. ಅಪಘಾತದ ಕುರಿತು ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರದಲ್ಲಿ ಮೃತರ ಶವ ಪರೀಕ್ಷೆ ನಡೆಸಲಾಗಿದೆ. ಅಪಘಾತ ಎಸಗಿ ಪರಾರಿಯಾಗಿರುವ ಕಾರಿನ ಪತ್ತೆಗೆ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳ ಮದುವೆ ಇಂದು ನಡೆಯಲಿದೆ: ಅಪಘಾತದಲ್ಲಿ ತಂದೆ ಸಾವನ್ನಪ್ಪಿದ್ದರೂ ಸಹ ಮದುವೆಯನ್ನು ನಿಲ್ಲಿಸುವುದು ಬೇಡ ಎಂದು ಸಂಬಂಧಿಕರು ತೀರ್ಮಾನ ಕೈಗೊಂಡಿದ್ದಾರೆ, ಹಿರಿಯರು ಇಟ್ಟ ಮುಹೂರ್ತ ದಲ್ಲಿಯೇ ಮದುವೆ ನಡೆಸಲು ಕುಟುಂಬಸ್ಥರು ತೀರ್ಮಾನ ನಡೆಸಿದ್ದಾರೆ.

ಮದುವೆ ಮೆರವಣಿಗೆಗೆ ಟ್ರಕ್​ ಡಿಕ್ಕಿ: ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಇಂದು ನಸುಕಿನ ಜಾವ ನಡೆದಿದೆ. ಸತಿಘರ್ ಸಾಹಿ ಬಳಿಯ ಎನ್‌ಎಚ್-20 ರಲ್ಲಿ ಸಾಗುತ್ತಿದ್ದ ಮದುವೆ ಮೆರವಣಿಗೆಯ ಮೇಲೆ ವೇಗವಾಗಿ ಬಂದ ಟ್ರಕ್​ವೊಂದು ಡಿಕ್ಕಿ ಹೊಡೆದಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *