ಮದುವೆ ದಿನದಂದೇ ವಧುವಿನ ತಂದೆ ಕೊಂದ ಮಾಜಿ ಪ್ರಿಯಕರ: ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು
ಕೇರಳದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ವಧುವಿನ ತಂದೆಯನ್ನು ಆಕೆ ಹಸೆ ಮಣೆ ಏರುವ ಮುನ್ನವೇ ಸ್ನೇಹಿತರೇ ಕೊಂದು ಹಾಕಿದ್ದಾರೆ. ಈ ಸಂಬಂಧ ಕೇರಳ ಪೊಲೀಸರು ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತಿರುವನಂತಪುರಂ: ವಧುವಿನ ತಂದೆಯನ್ನು ಮದುವೆಯ ದಿನವೇ ಹತ್ಯೆ ಮಾಡಿರುವ ಘಟನೆ ಕೇರಳ ರಾಜ್ಯದ ವರ್ಕಲಾ ಎಂಬಲ್ಲಿ ನಡೆದಿದೆ.
ಇಂದು ಬೆಳಗ್ಗೆ ವಡಸ್ಸೆರಿಕೋಣಂನಲ್ಲಿ ರಾಜು (61) ಎಂಬುವರನ್ನು ಕೊಲೆ ಮಾಡಲಾಗಿದೆ. ರಾಜು ಅವರ ಪುತ್ರಿ ಶ್ರೀಲಕ್ಷ್ಮಿ ಇಂದು ಹಸೆ ಮಣೆ ಏರಬೇಕಿತ್ತು.
ಮದುವೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು, ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸಂಭ್ರಮದ ಸಮಯದಲ್ಲಿ ವಿಷಾದಕರ ಘಟನೆ ಜರುಗಿದೆ. ಹುಡುಗಿಯ ಮಾಜಿ ಗೆಳೆಯ ಮತ್ತು ಅವನ ಸ್ನೇಹಿತರು, ಇಂದು ಮುಂಜಾನೆ ರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ವರು ಸೇರಿ ನಡೆಸಿದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ರಾಜು ಮೃತಪಟ್ಟಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ವಟಸ್ಸೆರಿಕೋಣಂನ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ವಿವರ: ನಿನ್ನೆ ವಧುವಿನ ಮನೆಯಲ್ಲಿ ಭರ್ಜರಿಯಾದ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಭೀಭತ್ಸಕರ ಘಟನೆ ನಡೆದಿದೆ. ವಡಸ್ಸೆರಿಕೋಣಂ ಮೂಲದವರಾದ ಜಿಷ್ಣು, ಜಿಜಿನ್, ಶ್ಯಾಮ್ ಮತ್ತು ಮನು ಎಂಬುವವರು ನಡುರಾತ್ರಿ ಒಂದು ಗಂಟೆ ಸುಮಾರಿಗೆ ವಧುವಿನ ಮನೆಗೆ ಆಗಮಿಸಿ, ತಮ್ಮ ಕಾರಿನಲ್ಲಿ ಜೋರಾಗಿ ಸಂಗೀತದ ಸೌಂಡ್ ಇಡುವ ಮೂಲಕ ಗಲಾಟೆ ಮಾಡಿದ್ದಾರೆ. ಈ ನಾಲ್ವರು ಸ್ನೇಹಿತರ ಇಂತಹ ಕೃತ್ಯವನ್ನು ವಧುವಿನ ತಂದೆ ರಾಜು ಪ್ರಶ್ನಿಸಿದ್ದಾರೆ. ಇದರಿಂದಾಗಿ ರಾಜು ಮತ್ತು ಮಗಳ ಮಾಜಿ ಸ್ಮೇಹಿತ ಹಾಗೂ ಅವರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ರಾಜುವಿನ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿಗಳಲ್ಲಿ ಒಬ್ಬ ರಾಜುವಿನ ತಲೆಗೆ ಗುದ್ದಲಿಯಿಂದ ಹೊಡೆದಿದ್ದಾನೆ. ಮತ್ತೊಬ್ಬ ರಾಜು ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಜಿಷ್ಣು ಮತ್ತು ಶ್ರೀಲಕ್ಷ್ಮಿ ಈ ಹಿಂದೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರ ನಡುವೆ ವಿರಸ ಬಂದು ಬೇರ್ಪಟ್ಟಿದ್ದರು. ಈ ವಿಚಾರವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾದ ಜಿಷ್ಣು ಮತ್ತು ಜಿಜಿನ್ ಸಹೋದರರು, ರಾಜು ಹತ್ಯೆ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮಾಹಿತಿ ಪಡೆದ ವರ್ಕಳ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುದೀರ್ಘ ಕಾಲ ಗಲ್ಫ್ನಲ್ಲಿ ಕೆಲಸ ಮಾಡಿದ ಕೊಲೆಯಾದ ರಾಜು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಜಿಷ್ಣು ಮತ್ತು ಜಿಜಿನ್ ರಾಜುವಿನ ನೆರೆಹೊರೆಯವರಾಗಿದ್ದಾರೆ. ಇದೇ ವೇಳೆ ವರ್ಕಲಾ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಮುಂದಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.