ಮಂಡ್ಯ: ಜಿಲ್ಲೆಯತ್ತ ಮುಂಗಾರು ಮುಖ ಮಾಡದಿರುವುದು ಜನರನ್ನು ಆತಂಕ ದೂಡುವಂತೆ ಮಾಡಿದೆ. ಮಾತ್ರವಲ್ಲದೆ ಜೂನ್ ಅಂತ್ಯದೊಳಗೆ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವುದು ನಿಶ್ಚಿತ.
ಈ ಬಾರಿ ನಿರೀಕ್ಷೆಯಂತೆ ಪೂರ್ವ ಮುಂಗಾರು ಜಿಲ್ಲೆಯಲ್ಲಿ ಅಬ್ಬರಿಸಲಿಲ್ಲ. ಅಲ್ಲಲ್ಲಿ ವರುಣದ ದರ್ಶನವಾಗಿದ್ದರೂ ಸಮಾಧಾನವಾಗುವಷ್ಟು ಪ್ರಮಾಣದಲ್ಲಿ ಆಗಲಿಲ್ಲ. ಪರಿಣಾಮ ಅಂದುಕೊಂಡಂತೆ ಬಿತ್ತನೆ ಪ್ರಮಾಣವೂ ಏರಿಕೆಯಾಗಿಲ್ಲ. ಮಳೆಯನ್ನೇ ನಂಬಿಕೊಂಡಿರುವ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.
ಡ್ಯಾಂನಲ್ಲಿಯೂ ಕ್ಷೀಣಿಸಿದ ನೀರು: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತವಾಗಲಾರಂಭಿಸಿದೆ. ಜೂ.8ರ ಬೆಳಗ್ಗೆ ವೇಳೆಗೆ 81.70 ಅಡಿ ನೀರಿನ ಸಂಗ್ರಹವಿದೆ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡಿದರೆ 11.556 ಇದೆ. ಅಂತೆಯೇ 3006 ಕ್ಯೂಸೆಕ್ ನೀರು ಒಳಹರಿವಿದ್ದರೆ, ಡ್ಯಾಂನಿಂದ 350 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಸಧ್ಯಕ್ಕೆ ಡ್ಯಾಂನಲ್ಲಿರುವ ನೀರಿನ ಸಂಗ್ರಹವನ್ನು ಗಮನಿಸಿದರೆ ಜೂನ್ ಅಂತ್ಯದವರೆಗೂ ಕುಡಿವ ನೀರಿನ ಸಮಸ್ಯೆ ಇಲ್ಲ. ಪ್ರತಿದಿನ ಕುಡಿಯುವ ನೀರಿಗೆಂದು ಬೆಂಗಳೂರಿಗೆ 800 ಕ್ಯೂಸೆಕ್ ಹಾಗೂ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗೆಂದು 100 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಅದಾಗಲೇ ಜೂನ್ ಪ್ರಾರಂಭವಾಗಿ ಒಂಭತ್ತು ದಿನ ಕಳೆಯುತ್ತಿದ್ದರೂ ಮಳೆ ಮಾತ್ರ ಕರುಣೆ ತೋರುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆಗೆ ಸಮಸ್ಯೆ ಬಿಗಡಾಯಿಸಿ ಕುಡಿಯ ನೀರಿಕ್ಕೂ ತತ್ವಾರ ಎದುರಾಗುವುದು ನಿಶ್ಚಿತ.
ಕಳೆದ ವರ್ಷ ಅಂದರೆ 2022ರಲ್ಲಿ ಜೂ.8ರಂದು ಡ್ಯಾಂನಲ್ಲಿ 105.24 ಅಡಿ ನೀರಿನ ಸಂಗ್ರಹವಿತ್ತು. ಅಂದರೆ ಬರೋಬರಿ 23 ಅಡಿಯಷ್ಟು ನೀರಿನ ಪ್ರಮಾಣ ಕಡಿಮೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಈ ವರ್ಷ ಏಪ್ರಿಲ್ನಲ್ಲಿಯೇ ಡ್ಯಾಂನ ನೀರಿನ ಮಟ್ಟ 90 ಅಡಿಗೆ ಕುಸಿದಿತ್ತು. ಮಾತ್ರವಲ್ಲದೆ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದು ವೇಣುಗೋಪಾಲಸ್ವಾಮಿ ದೇವಾಲಯ ಐದು ವರ್ಷದ ನಂತರ ಗೋಚರವಾಗಿದೆ. ಶತಮಾನದಷ್ಟು ಹಳೆಯದಾದ ದೇವಾಲಯ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಸಾಮಾನ್ಯವಾಗಿ 85 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಕುಸಿತ ಕಂಡುಬಂದಲ್ಲಿ ದೇವಾಲಯ ಗೋಚರವಾಗುತ್ತದೆ.
ಈ ವರ್ಷ ಪೂರ್ವ ಮುಂಗಾರು ಮಳೆ ಬಾರಿ ಕೈ ಕೊಟ್ಟಿದೆ. ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಇದರ ಪರಿಣಾಮ ಬೇಸಿಗೆ ಅವಧಿಯಲ್ಲೇ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು. ಈ ಬಾರಿ ಮಳೆಯ ಕೊರತೆಯಿಂದ ದಿನೇ ದಿನೇ ಜಲಾಶಯದ ನೀರಿನ ಮಟ್ಟ ಕುಸಿಯತೊಡಗಿದೆ. ಇನ್ನು ಮಳೆಗಾಗಿ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಪೂರ್ವ ಮುಂಗಾರು ಕೈ ಕೊಟ್ಟಿದ್ದರೂ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಬಹುದೆನ್ನುವ ನಿರೀಕ್ಷೆ ಹೊಂದಿದ್ದಾರೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತಾದರೆ ರೈತರು ನಿರಾಳರಾಗಲಿದ್ದಾರೆ. ಅದರಂತೆ ಮಳೆಯ ನಿರೀಕ್ಷೆಯಲ್ಲಿ ಕೃಷಿ ಆರಂಭಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಾವೇರಿ ಕಣಿವೆಯಲ್ಲೇ ಮಳೆಯಿಲ್ಲ: ಹಿಂದಿನ ಕೆಲ ವರ್ಷಗಳನ್ನು ಗಮನಿಸಿದಾಗ ಮಂಡ್ಯ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟಿದ್ದರೂ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಅದರಿಂದಾಗಿ ಒಳಹರಿವಿನ ಪ್ರಮಾಣ ಹೆಚ್ಚಿ ಡ್ಯಾಂ ಗರಿಷ್ಠ ಮಟ್ಟ ತಲುಪಿರುವ ಉದಾಹರಣೆಗಳಿವೆ. ಆದರೆ ಈ ಬಾರಿ ಕಾವೇರಿ ಕಣಿವೆ ಜಿಲ್ಲೆಗಳಲ್ಲಿಯೇ ಮಳೆಯಾಗಿಲ್ಲದಿರುವುದು ಚಿಂತೆಗೀಡು ಮಾಡಿದೆ.
ಇನ್ನು ಸಧ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮೇಕೆದಾಟು ಯೋಜನೆ ಚರ್ಚೆಗೆ ಬಂದಿದೆ. ಅಂದರೆ ಕೆಆರ್ಎಸ್ ಡ್ಯಾಂನಿಂದ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಸಂಗ್ರಹಿಸಲು ರಾಮನಗರ ಜಿಲ್ಲೆಯಲ್ಲಿ ಮೇಕೆದಾಟು ಯೋಜನೆ ಮಾಡಬೇಕೆನ್ನುವ ಚರ್ಚೆ ನಡೆದಿತ್ತು. ಇದು ಅನುಷ್ಠಾನವಾದರೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹ ಮಾಡಬಹುದು. ಆದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆ ಮಾಡಬೇಕೆಂದು ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡಿದ್ದರು. ಇದೀಗ ಅವರ ಸರ್ಕಾರವೇ ಇರುವುದರಿಂದ ಯೋಜನೆ ರೂಪಿಸಬೇಕಿದೆ.
ಮಾತ್ರವಲ್ಲದೆ ಬಹುತೇಕ ವರ್ಷ ನೂರಾರು ಟಿಎಂಸಿ ಅಡಿಯಷ್ಟು ನೀರು ಡ್ಯಾಂನಿಂದ ಹರಿದು ಸಮುದ್ರ ಪಾಲಾಗಿದೆ. ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವ ಕಾರಣ ಏಪ್ರಿಲ್ ತಿಂಗಳು ಮುಗಿಯಲಾರಂಭಿಸುತ್ತಿದ್ದಂತೆ ಕೆಆರ್ಎಸ್ ಜಲಾಶಯದಲ್ಲಿ ನೀರು ಎಷ್ಟಿದೆ ಎನ್ನುವುದರ ಮೇಲೆ ಎಲ್ಲರ ಗಮನಹರಿಯುತ್ತದೆ. ಉತ್ತಮ ಮಳೆ ಬಂದಾಗ ನೀರನ್ನು ಸಂರಕ್ಷಿಸಿಡಲು ಯೋಜನೆ ರೂಪಿಸಬೇಕಿದೆ. ಅಂದರೆ ಕೆರೆಗಳ ಪುನಶ್ಚೇತನ, ಹೊರಕೆರೆಗಳ ನಿರ್ಮಾಣದಂತಹ ಪರಿಣಾಮಕಾರಿ ಹಾಗೂ ಉಪಯುಕ್ತ ಕಾರ್ಯಕ್ರಮದ ಅವಶ್ಯಕತೆ ಇದೆ.
100 ಹಳ್ಳಿಗಳಿಗೆ ಸಂಕಷ್ಟ?: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದರೂ ಒಂದಷ್ಟು ಕಡೆ ಪರವಾಗಿಲ್ಲ ಎನ್ನುವಂತೆ ಮಳೆ ಸುರಿದಿದೆ. ಜತೆಗೆ ಬೇಸಿಗೆ ಕಾಲವೂ ಮುಗಿದಿದೆ. ಆದ್ದರಿಂದ ಈವರೆಗೆ ಕುಡಿಯುವ ನೀರಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೂ ಜೂನ್ ಅಂತ್ಯದೊಳಗೆ ಮಳೆಯಾಗದಿದ್ದರೆ ಗ್ರಾಮಗಳಲ್ಲಿಯೂ ಕುಡಿವ ನೀರಿಗೆ ಸಮಸ್ಯೆಯಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಂತೆ ಹಿಂದಿನ ವರ್ಷಗಳಲ್ಲಿ ಬರಬಂದಾಗ ಸಮಸ್ಯೆಯಾಗಿದ್ದ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಅದರಂತೆ ಮಳೆ ಕೈ ಕೊಟ್ಟರೆ ಸುಮಾರು 100 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆಯಾಗಲಿದೆ. ಅದರಲ್ಲಿಯೂ ನಾಗಮಂಗಲ ತಾಲೂಕಿನಲ್ಲಿಯೇ ಹೆಚ್ಚು. ಆದ್ದರಿಂದ ಖಾಸಗಿ ಬೋರ್ವೆಲ್, ಟ್ಯಾಂಕರ್ ವ್ಯವಸ್ಥೆ ಬಗ್ಗೆ ಯೋಜನೆ ರೂಪಿಸಲಾಗಿದೆ.
8.5 ಮಿ.ಮೀ ಮಳೆ ದಾಖಲು: ಪ್ರಸಕ್ತ ವರ್ಷ ಜೂ.1ರಿಂದ 7ರವರೆಗೆ ಜಿಲ್ಲೆಯಲ್ಲಿ 23.9 ಮಿ.ಮೀ ವಾಡಿಕೆ ಮಳೆಗೆ ಕೇವಲ 10.3 ಮಿ.ಮೀ ಮಳೆ ಸುರಿದಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 7.2 ಮಿ.ಮೀ, ಮದ್ದೂರಿನಲ್ಲಿ 11.2, ಮಳವಳ್ಳಿಯಲ್ಲಿ 19.8, ಮಂಡ್ಯದಲ್ಲಿ 5, ನಾಗಮಂಗಲದಲ್ಲಿ 13.2, ಪಾಂಡವಪುರದಲ್ಲಿ 6.7 ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ 3.4 ಮಿ.ಮೀ ಮಳೆಯಾಗಿದೆ. ಇನ್ನು ಜೂ.7ರಂದು ಜಿಲ್ಲೆಯಲ್ಲಿ 2.5 ಮಿ.ಮೀ ಮಳೆಗೆ 1.9 ಮಿ.ಮೀ ಮಳೆಯಾಗಿದೆ.