ಹೈದರಾಬಾದ್: ಅರ್ಜುನ್ ರೆಡ್ಡಿ ಸಿನಿಮಾ ಬಿಡುಗಡೆಯಾದಾಗಿನಿಂದ ನಟ ವಿಜಯ್ ದೇವರಕೊಂಡ ವಿರುದ್ಧ ನಟಿ, ನಿರೂಪಕಿ ಅನಸೂಯ ಭಾರದ್ವಜ್ ಭಾರೀ ಅಸಮಾಧಾನ ಹೊಂದಿದ್ದಾರೆ.
ಅರ್ಜುನ್ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್ ಆ ಡೈಲಾಗ್ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ವಿಜಯ್ ಅವರ ಲೈಗರ್ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್ ಮಾಡುವ ಮೂಲಕ ಮತ್ತೆ ಅನಸೂಯ ವಿಜಯ್ಗೆ ತಿರುಗೇಟು ನೀಡಿದ್ದರು. ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್ ಮಾಡಿದ್ದರು.
ಸಮಯ ಸಿಕ್ಕಾಗೆಲ್ಲ‘ ವಿಜಯ್ ವಿರುದ್ಧ ಅನಸೂಯ ವಾಗ್ದಾಳಿ ನಡೆಸುವುದರಿಂದ ವಿಜಯ್ ಅಭಿಮಾನಿಗಳಿಗೆ ಅನಸೂಯಾರನ್ನು ಕಂಡರೆ ಆಗುವುದಿಲ್ಲ. ಆಂಟಿ ಎಂದು ಕಾಮೆಂಟ್ ಮಾಡುವುದಲ್ಲದೇ ಕೆಟ್ಟ ಪದಗಳಿಂದ ಅನಸೂಯ ಅವರನ್ನು ಸದಾ ನಿಂದಿಸುತ್ತಿರುತ್ತಾರೆ.
ವಿಜಯ್ ವಿರುದ್ಧ ಗಂಭೀರ ಆರೋಪ
ತಾಜಾ ಸಂಗತಿ ಏನೆಂದರೆ, ಅನಸೂಯ ಅವರು ನಟ ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅನಸೂಯ, ವಿಜಯ್ ಅಭಿಮಾನಿಗಳ ಜೊತೆಗೆ ಶೀತಲ ಸಮರ ಆರಂಭವಾದಾಗಿನಿಂದ ಸಾಕಷ್ಟು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರಂತೆ. ಅಭಿಮಾನಿಗಳ ನಡೆಯ ಬಗ್ಗೆ ವಿಜಯ್ಗೆ ಗೊತ್ತಿದೆಯೋ? ಇಲ್ಲವೋ? ಆದರೆ, ವಿಜಯ್ ಆಪ್ತರೊಬ್ಬರ ಪ್ರಕಾರ, ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲು ವಿಜಯ್ ಹಣ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ನನಗೆ ಸಾಕಾಗಿ ಹೋಗಿದೆ. ಇನ್ನು ಮುಂದೆ ವಿಜಯ್ ಬಗ್ಗೆಯಾಗಲಿ ಆತನ ನಟನೆಯ ಬಗ್ಗೆಯಾಗಲಿ ಮಾತನಾಡದಿರಲು ನಿರ್ಧರಿಸಿದ್ದೇನೆ ಎಂದು ಅನಸೂಯ ತಿಳಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. (ಏಜೆನ್ಸೀಸ್)