
ಶಿವಮೊಗ್ಗ: RSS ಬೆಂಬಲಿತ ಶಾಲೆಯಲ್ಲಿ ಬಾಲಕಿ ಸಾವು: ಅಕ್ರಮ ಚಟುವಟಿಕೆ ಬಯಲು ಮಾಡುತ್ತೇವೆ: ಕಾಂಗ್ರೆಸ್
ಬೆಂಗಳೂರು, ಜೂನ್ 12: ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಖಾಸಗಿ ವಸತಿ ಶಾಲೆಯಲ್ಲಿ ಬಾಲಕಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದೆ. RSS ಬೆಂಬಲಿತ ಶಾಲೆಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದೆ.
ಸಾಗರದ ಸೊರಬ ತಾಲೂಕಿನ ಶಿವಪುರ ಗ್ರಾಮದ ಬಾಲಕಿ ತೇಜಸ್ವಿನಿ (13) ಕಳೆದ ವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಬಾಲಕಿ ಖಾಸಗಿ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಅವಳ ಸಾವಿನಿಂದ ಬಾಲಕಿಯ ಕುಟುಂಬಸ್ಥರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ನಮ್ಮ ಮಗಳ ಸಾವು ಅನುಮಾನಾಸ್ಪದವಾಗಿದೆ. ನಮಗೆ ನ್ಯಾಯ ಒದಗಿಸಬೇಕು ಎಂದು ಕಣ್ಣೀರಿಟ್ಟು ಆಗ್ರಹಿಸಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಈ ಸಂಬಂಧ ಸೋಮವಾರ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ವಸತಿ ಶಾಲೆಯ ಮುಖ್ಯಸ್ಥನ ಕಿರುಕುಳದಿಂದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆಯಿಂದ ಹಲವು ನಿಗೂಢ ಸಂಗತಿಗಳು ಹೊರಬರುತ್ತಿವೆ ಎಂದು ಟೀಕಿಸಿದೆ.
ಹೆಣ್ಮಕ್ಕಳ ಕಳ್ಳಸಾಗಾಣಿಕೆ ಬೆಳಕಿಗೆ: ಕಾಂಗ್ರೆಸ್
ಬೇರೆ ರಾಜ್ಯಗಳಿಂದ ಹೆಣ್ಣುಮಕ್ಕಳ ಕಳ್ಳಸಾಗಣಿಕೆ ನಡೆಸಿರುವ ಸಂಗತಿಯೂ ಬೆಳಕಿಗೆ ಬರುತ್ತಿದೆ. ರಾಷ್ಟ್ರೀ ಸ್ವಯ ಸೇವಕ ಸಂಘದ (RSS) ಮುಖಂಡ ಎಚ್.ಪಿ. ಮಂಜಪ್ಪನನ್ನು ಸದ್ಯ ಬಾಲಕಿ ಸಾವಿನ ಪ್ರಕರಣದ ವಿಚಾರವಾಗಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಶಾಲೆಯಲ್ಲಿ ನಡೆಯುತ್ತಿರುವ ರಹಸ್ಯ ಅಕ್ರಮ ಚಟುವಟಿಕೆಗಳೆಲ್ಲವನ್ನೂ ಬಯಲಿಗೆಳೆಯುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಎಂದಿನಂತೆ ಶಾಲೆಗೆ ತೆರಳಿದ್ದ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಬೆಳಗ್ಗೆ ಶಾಲೆಯ ವಾಹನದಲ್ಲಿಕರೆದುಕೊಂಡು ಸ್ಥಳಿಯ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಅಸುನೀಗಿದ್ದಳು ಎಂದು ತಿಳಿದು ಬಂದಿದೆ.

ಬಂಧಿತ ಮಂಜಪ್ಪ ಹೇಳಿದ್ದೇನು
ಬಾಲಕಿ ಸಾವಿನ ನಂತರ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಆರ್ಎಸ್ಎಸ್ ಮುಖಂಡ ಎನ್ನಲಾಗುವ ವಸತಿ ಶಾಲೆ ಮುಖ್ಯಸ್ಥ ಎಚ್.ಪಿ. ಮಂಜಪ್ಪ ಅವರು ಭಾನುವಾರ 8ನೇ ತರಗತಿಗೆ ತೇಜಸ್ವಿನಿ ಅವರನ್ನು ದಾಖಲಿಸಿಕೊಳ್ಳಲಾಗಿತ್ತು. ಇವರ ಜತೆ ಇವರದೇ ಕುಟುಂಬದ 7 ಮಕ್ಕಳನ್ನು ಸೇರಿಸಿಕೊಳ್ಳಲಾಗಿತ್ತು. ಬುಧವಾರ ರಾತ್ರಿ ಬಾಲಕಿ ಸುಸ್ತು ಎಂದಿದ್ದಳು. ಕೂಡಲೇ ಶಾಲೆಯಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲಾಯಿತು.
ಗುರುವಾರ ಬೆಳಗ್ಗೆ ತೇಜಸ್ವಿನಿ ವಸತಿಯ ರೂಮಿನಲ್ಲಿ ವಾಂತಿ ಮಾಡಿಕೊಂಡಳು. ಸುದ್ದಿ ತಿಳಿಯುತ್ತಿದ್ದಂತೆ ಆಕೆಯನ್ನು ಶಾಲಾ ವಾಹನದಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ವಿದ್ಯಾರ್ಥಿನಿ ಶಾಲೆಗೆ ಬಂದು ಐದು ದಿನವಾಗಿದ್ದರಿಂದ ಹೆಚ್ಚಿನ ಮಾಹಿತಿ ಸಿಗಲಿಲ್ಲ. ನಮ್ಮ ವಸತಿ ಶಾಲೆಯಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸತ್ಯ ತಿಳಿಯಲಿದೆ ಎಂದು ಹೇಳಿದ್ದರು.
ಸದ್ಯ ಪ್ರಕರಣ ಸಂಬಂಧ ವಸತಿ ಶಾಲೆಯ ಮುಖಂಡ ಮಂಜಪ್ಪ ಅವರನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಈ ವಿಚಾರವಾಗಿ ಗರಂ ಆಗಿರುವ ಕಾಂಗ್ರೆಸ್ ಆರ್ಎಸ್ಎಸ್ ಬೆಂಬಲಿತ ಶಾಲೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಹಲವು ಸಂಗತಿಗಳು ಹೊರ ಬಂದಿವೆ. ಇದರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಬಗ್ಗೆ, ಅಕ್ರಮ ಚಟುವಟಿಕೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದೆ.
