ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು: ಬಿಜೆಪಿಯ ಕೆಲವು ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಜೊತೆಹೊಂದಾಣಿಕೆ ರಾಜಕಾರಣಮಾಡುತ್ತಿದ್ದಾರೆ ಎಂದು ಹೇಳಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಸಹಕಾರ ಇಲಾಖೆಯ ವತಿಯಿಂದ ಅಲಿ ಆಸ್ಕರ್ ರಸ್ತೆಯ ಸಹಕಾರ ಸಂಘಗಳ ನಿಬಂಧಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಹಕಾರ ಸಮೃದ್ಧಿ ಸೌಧ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
“ಪ್ರತಾಪ್ ಸಿಂಹ ಅವರಿಗೆ ರಾಜಕೀಯ ಪ್ರಬುದ್ಧತೆಯಿಲ್ಲ. ಇನ್ನೂ ಎಳಸು. ರಾಜಕೀಯ ಪಕ್ವತೆ ಬೆಳೆದಿಲ್ಲ. ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿಯನ್ನು ತಾವೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಅವರು ಬೆಂಗಳೂರು ರಸ್ತೆಗೆ ಸಂಸದರೇ” ಎಂದು ಪ್ರಶ್ನಿಸಿದರು.
“ನನ್ನ ರಾಜಕೀಯ ಜೀವನದಲ್ಲಿ ಪ್ರತಿಪಕ್ಷದವರೊಂದಿಗೆ ಮಾತೂ ಆಡುವುದಿಲ್ಲ. ಅಧಿಕಾರದಲ್ಲಿದ್ದಾಗ ಅವರ ಮನೆಗೂ ಹೋಗುವುದಿಲ್ಲ. ಅವರೇನಾದರೂ ಬಂದರೆ ಸೌಜನ್ಯಕ್ಕಾಗಿ ಮಾತನಾಡುತ್ತೇನೆ. ಆದರೆ, ರಾಜಕೀಯ ಮಾತನಾಡುವುದಿಲ್ಲ” ಎಂದು ಸಿಂಹ ಆರೋಪವನ್ನು ತಳ್ಳಿ ಹಾಕಿದರು.
“ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅವರೇ ಹೇಳಬೇಕು. ಹೊಂದಾಣಿಕೆ ರಾಜಕಾರಣ ಮಾಡಿಕೊಂಡವರು ಯಾರು ಎಂದು ಅವರಿಗೆ ಗೊತ್ತಿರಬೇಕಲ್ವಾ?, ಮಾಹಿತಿ ಇದ್ದರೆ ಹೇಳಲಿ. ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ. ಯಾವ ತನಿಖೆ, ಯಾವಾಗ ಮಾಡಿಸಬೇಕು ಮತ್ತು ಯಾರಿಂದ ಮಾಡಿಸಬೇಕು ಅನ್ನೋದು ನಮಗೆ ಸೇರಿದ್ದು. ಯಾರೋ ಹೇಳಿದರೆಂದು ತನಿಖೆ ಮಾಡಿಸುವುದಿಲ್ಲ. ಸಮಯ ಬಂದಾಗ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ” ಎಂದರು.
‘ನಿನ್ನೆಯದ್ದು ಅಧಿಕೃತ ಸಭೆಯಲ್ಲ’: ನಿನ್ನೆ ನಡೆದ ಬಿಬಿಎಂಪಿ ಸಭೆಯಲ್ಲಿಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಅವರು ಭಾಗಿಯಾಗಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, “ಅದು ಅಧಿಕೃತ ಸಭೆಯಲ್ಲ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಪ್ರಾಸಂಗಿಕವಾಗಿ ಬಿಬಿಎಂಪಿ ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ. ಹೆಬ್ಬಾಳ ಫ್ಲೈ ಓವರ್ ನೋಡಲು ಹೋಗುತ್ತಿದ್ದ ಸಂದರ್ಭದಲ್ಲಿ ಹಾಜರಾಗಿದ್ದಾರೆ. ಉಪ ಮುಖ್ಯಮಂತ್ರಿಗಳು ಶಾಸಕರನ್ನು ಭೇಟಿ ಮಾಡಿದ್ದು, ಕಾನೂನು ಅಭಿಪ್ರಾಯ ಪಡೆಯಲು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು ಅಷ್ಟೇ” ಎಂದು ಸ್ಪಷ್ಟಪಡಿಸಿದರು.
ಮಂಗಳವಾರ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, “ಬಿಜೆಪಿಯನ್ನು 40% ಸರ್ಕಾರ ಎಂದು ಪ್ರಚಾರ ಮಾಡಿದ್ದೀರಿ. ಈಗ ನಿಮ್ಮದೇ ಸರ್ಕಾರ ಬಂದಿದೆ. ಈ ಬಗ್ಗೆ ತನಿಖೆ ಮಾಡಿಸಿ. ಯಾಕೆ ತನಿಖೆ ಮಾಡಿಸುತ್ತಿಲ್ಲ?. ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೀರಾ” ಎಂದು ಪ್ರಶ್ನಿಸಿದ್ದರು. ಸಂಸದರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಬಿಬಿಎಂಪಿ ಸಭೆಯಲ್ಲಿ ಪಾಲ್ಗೊಂಡ ರಂದೀಪ್ ಸುರ್ಜೆವಾಲ ಬಗ್ಗೆಯೂ ಆರೋಪ ಕೇಳಿ ಬಂದಿದ್ದು ಬಿಜೆಪಿ ಸೇರಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳ ಜೊತೆಗೇನು ಕೆಲಸ? ಇದು 85% ಡೀಲ್ ಫಿಕ್ಸಿಂಗ್ ಸಭೆಯೇ ಎಂದು ಟ್ವಿಟರ್ನಲ್ಲಿ ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದರೆ, ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರ್ಕಾರವೋ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ