ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ ಎಂ ವಿಜಯಭಾಸ್ಕರ್ ಅವರು ತಮ್ಮ ವರದಿ ಸಲ್ಲಿಕೆ ಮಾಡಿದ್ದಾರೆ.

Administrative-reforms-comm

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ ಎಂ ವಿಜಯಭಾಸ್ಕರ್ ಅವರು ತಮ್ಮ ವರದಿ ಸಲ್ಲಿಕೆ ಮಾಡಿದ್ದಾರೆ.

ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ. ಎಂ. ವಿಜಯಭಾಸ್ಕರ್ ಅವರು ಇಂದು ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಈ ವೇಳೆ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಆಯೋಗವು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತ ಸುಧಾರಣಾ ಆಯೋಗದ ಎರಡನೇ ಹಾಗೂ ಮೂರನೇ ವರದಿಯನ್ನು ಸಲ್ಲಿಕೆ ಮಾಡಿತ್ತು. ಈ ವರದಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಒಳಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡಿತ್ತು.

ಆಯೋಗದ ಶಿಫಾರಸುಗಳ ಪ್ರಮುಖಾಂಶಗಳು ಇಂತಿವೆ.
1.ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿ ಇತ್ಯಾದಿಗಳಲ್ಲಿ ಆಗುವ ಅನುಪಯುಕ್ತ ವೆಚ್ಚಗಳ ತಡೆಗೆ ‘ಅನುಪಯುಕ್ತ ವೆಚ್ಚ ತಡೆ ಕಾರ್ಯಪಡೆ ರಚನೆ’.
2.ಸರ್ಕಾರದ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
3.ಎಲ್ಲಾ ಇಲಾಖೆಗಳು ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು.
4.ಪ್ರಸ್ತುತ ಅಂಚೆ ಕಚೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ. ರಾಜ್ಯದಲ್ಲಿರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಬಹುದು.
5. ಗ್ರಾಮ ಮಟ್ಟದ ಉದ್ಯಮಿಗಳಿಂದ (VLE) ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ರಾಜ್ಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು VLE ಗಳನ್ನು ಜನಸೇವಕರಾಗಿ ಬಳಸಿಕೊಳ್ಳಬಹುದು.

6.ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಇಲಾಖೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಮತ್ತು ಜಮೀನಿನ ಮೌಲ್ಯವು ರೂ.5 ಕೋಟಿ ಮೀರದ ಸರ್ಕಾರಿ ಜಮೀನನ್ನು ಪರಿವರ್ತನಾ ಶುಲ್ಕದ ವಿನಾಯಿತಿ ನೀಡಿ ಉಚಿತವಾಗಿ ಮಂಜೂರು ಮಾಡುವ ಹೆಚ್ಚಿನ ಅಧಿಕಾರವನ್ನು ಪ್ರತ್ಯಾಯೋಜಿಸಬಹುದು.
7.ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು(DPE) ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬಹುದು.
8.ಭೂಸ್ವಾಧೀನಕ್ಕೆ ಪರಿಹಾರಧನದ ಪಾವತಿಯು ಕಾಲಮಿತಿಯದ್ದಾಗಿರಬೇಕು. ಕಾಲಮಿತಿಯಲ್ಲಿ ಪಾವತಿಸದಿದ್ದರೆ ವಿಳಂಬವಾದ ಅವಧಿಗೆ ಅನವಶ್ಯಕಾಗಿ ಹೆಚ್ಚುವರಿ ಪರಿಹಾರ ಧನವನ್ನು ಪಾವತಿಸಬೇಕಾಗುತ್ತದೆ ಎಂಬಿತ್ಯಾದಿ ಶಿಫಾರಸ್ಸುಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *