DK Shivakumar Waits For Lakshmi Hebbalkar : ಡಿಸಿಎಂ ಡಿಕೆ ಶಿವಕುಮಾರ್‌ ಅವರು ಬುಧವಾರ ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಡಿಕೆ ಶಿವಕುಮಾರ್‌ ಜೊತೆ ಬಂದಿರಲಿಲ್ಲ. ಆಗ ಹೇ ಲಕ್ಷ್ಮೀನ ಕರೀರಿ, ಎಂದು ಶಾಸಕ ಎನ್‌ಎಚ್‌ ಕೋನರೆಡ್ಡಿಗೆ ಡಿಕೆ ಶಿವಕುಮಾರ್‌ ಗದರಿಸಿದರು. ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್‌ ಬರುವವರೆಗೂ ಕಾದು ನಂತರ ಮಾತು ಪ್ರಾರಂಭಿಸಿದರು.

Lakshmi Hebbalkar DK Shivakumar
ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಡಿಕೆ ಶಿವಕುಮಾರ್‌ (ಸಂಗ್ರಹ ಚಿತ್ರ)

ಹೈಲೈಟ್ಸ್‌:

  • ಹೇ ಲಕ್ಷ್ಮೀನ ಕರೀರಿ, ಕೋನರೆಡ್ಡಿಗೆ ಗದರಿಸಿದ ಡಿಕೆ ಶಿವಕುಮಾರ್‌!
  • ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗಾಗಿ ಕಾದ ಡಿಸಿಎಂ ಡಿಕೆ ಶಿವಕುಮಾರ್‌
  • ಲಕ್ಷ್ಮೀ ಹೆಬ್ಬಾಳ್ಕರ್‌ ಬಂದ ಬಳಿಕ ಮಾತು ಆರಂಭಿಸಿದ ಡಿಸಿಎಂ ಡಿಕೆಶಿ

ಹುಬ್ಬಳ್ಳಿ: ಹೇ ಲಕ್ಷ್ಮೀನ ಕರೀರಿ ಎಂದು ಶಾಸಕ ಎನ್‌ಎಚ್‌ ಕೋನರೆಡ್ಡಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಗದರಿಸಿದ ಪ್ರಸಂಗಕ್ಕೆ ಹುಬ್ಬಳ್ಳಿ ಸಾಕ್ಷಿಯಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗಾಗಿ ಡಿಕೆ ಶಿವಕುಮಾರ್‌ ಕೆಲ ಹೊತ್ತು ಕಾಯ್ದು ಅವರು ಬಂದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಲು ಆರಂಭಿಸಿದರು.

ಮಾಜಿ ಸಿಎಂ ಜಗದೀಶ್‌ ಶೆಟ್ಟರ ಮನೆಯಿಂದ ಮೊದಲು ಹೊರ ಬಂದ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಡಿಕೆಶಿ ಬಂದು‌ ನಿಂತರು. ಆದರೆ, ಶೆಟ್ಟರ್‌ ಮನೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇನ್ನೂ ಹೊರಬಂದಿರಲಿಲ್ಲ. ಇದರಿಂದ ತುಸು ಕೋಪ ಪ್ರದರ್ಶಿಸಿದ ಡಿಕೆ ಶಿವಕುಮಾರ್‌, ನವಲಗುಂದ ಶಾಸಕ‌ ಎನ್‌ಎಚ್‌ ಕೋನರೆಡ್ಡಿ ಅವರಿಗೆ ಲಕ್ಷ್ಮೀನ ಕರೀರಿ ಎಂದು ಗದರಿದರು.

ಲಕ್ಷ್ಮೀ ಹೆಬ್ಬಾಳ್ಕರ್‌ ಕೆಲಸಕ್ಕೆ ಡಿಕೆ ಶಿವಕುಮಾರ್‌ ಮೆಚ್ಚುಗೆ! ಹೆಬ್ಬಾಳ್ಕರ್‌ ಮೇಲೆ ಜನರಿಟ್ಟಿರುವ ಪ್ರೀತಿಗೆ ಕನಕಪುರ ಬಂಡೆ ಫಿದಾ!
ಆಗ, ಎನ್‌ಎಚ್‌ ಕೋನರೆಡ್ಡಿ, ಮೇಡಂ ಅವರು ಒಳಗೆ ಇದ್ದಾರೆ ಬರುವುದು ಲೇಟ್ ಆಗುತ್ತದೆ ಎಂದು ಡಿಸಿಎಂಗೆ ತಿಳಿಸಿದರು. ಹೇ ಸುಮ್ಮನೇ ಲಕ್ಷ್ಮೀನ ಕರೀರಿ ಎಂದು ಡಿಸಿಎಂ, ತಮ್ಮದೇ ದಾಟಿಯಲಿ ಶಾಸಕ ಎನ್‌ಎಚ್‌ ಕೋನರೆಡ್ಡಿಯವರಿಗೆ ಮತ್ತೊಮ್ಮೆ ಹೇಳಿದರು. ‌ ಇಷ್ಟಾದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೊರಬರಲೇ ಇಲ್ಲ.‌

ಇದೇ ವೇಳೆ ಹೊರ ಬಂದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನೀವು ಮಾತಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಲಹೆ ನೀಡಿದರು. ಅದೇ ಹೊತ್ತಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿ ಜತೆಯಾದರು. ಸಚಿವೆ ಬರುತ್ತಿದ್ದಂತೆ ಡಿಕೆ ಶಿವಕುಮಾರ್‌ ಮಾಧ್ಯಮದವರಿಗೆ ಹೇಳಿಕೆ ನೀಡಲಾರಂಭಿಸಿದರು.

ಡಿಕೆ ಶಿವಕುಮಾರ್‌ ಏನ್‌ ಹೇಳಿದ್ರು?

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ್‌ ಸವದಿ, ಗುಬ್ಬಿ ಶ್ರೀನಿವಾಸ್ ಅವರಿಂದ ನಮಗೆ ಶಕ್ತಿ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ‌ಕೆ ಶಿವಕುಮಾರ್ ಹೇಳಿದ್ದಾರೆ. ಸೋಲು-ಗೆಲುವು ರಾಜಕಾರಣದಲ್ಲಿ ಇರೋದೆ. ಆದರೆ, ದೇವರು ಅವಕಾಶ ಕೊಟ್ಟಿರುತ್ತಾನೆ ಅದನ್ನು ಬಳಸಿಕೊಳ್ಳಬೇಕು. ಚುನಾವಣಾ ಸಂದರ್ಭದಲ್ಲಿ ಬಿ ಫಾರಂ ಕೊಟ್ಟ ಮೇಲೆ ಜಗದೀಶ್ ಶೆಟ್ಟರ್ ಅವರ ಜೊತೆ ಮಾತಾಡಿರಲಿಲ್ಲ. ನಾನು ಪ್ರಚಾರದಲ್ಲಿ ಬ್ಯುಸಿ ಆಗಿದ್ದೆ, ಹೀಗಾಗಿ ಮಾತಾಡೋಕೆ ಆಗಿರಲಿಲ್ಲ. ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಅವರಿಂದ ಬದಲಾಗಣೆ ಆಯ್ತು. ಇಡೀ ರಾಜ್ಯದಲ್ಲಿ ಬದಲಾವಣೆ ಆಯ್ತು ಎಂದು ಹೇಳಿದರು.

ದೇವರೂ ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡ್ತಾನೆ, ನಾವು ಅದನ್ನು ಉಪಯೋಗಿಸಿಕೊಳ್ಳಬೇಕು. ಶೆಟ್ಟರ್‌ ಅವರ ಜೊತೆಗೆ ಕಾಂಗ್ರೆಸ್ ಪಕ್ಷವಿದೆ. ನಮಗೆ ವರಿಷ್ಠರ ಆದೇಶವಿದೆ, ರಾಷ್ಟ್ರೀಯ ಅಧ್ಯಕ್ಷರು ಸಂದೇಶ ಕೊಟ್ಟಿದ್ದು, ಅದನ್ನು ತಲುಪಿಸಿದ್ದೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

ಇನ್ನು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಮುಂಬರುವ ಲೋಕಸಭೆ ಚುನಾವಣೆ ಕುರಿತು ಪರಸ್ಪರ ಚರ್ಚೆ ನಡೆಯಿತು. ನಮ್ಮ ಮಧ್ಯೆ ಔಪಚಾರಿಕ ಮತ್ತು ಸೌಹಾರ್ದಯುತವಾದ ಮಾತುಕತೆ ನಡೆದಿದೆ.
ತಮ್ಮ ಸೇರ್ಪಡೆಯಿಂದ ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಲಾಭವಾಗಿದ್ದು, ಶಕ್ತಿ ಬಂದಿದೆ ಎಂದು ಶಿವಕುಮಾರ್ ತಿಳಿಸಿದರು ಎಂದು ಶೆಟ್ಟರ್ ಹೇಳಿದರು.

Leave a Reply

Your email address will not be published. Required fields are marked *