ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 2026ರ ಜೂನ್ಗೆ ಏರ್ಪೋರ್ಟ್ ಮೆಟ್ರೋ ಲೈನ್ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 2026ರ ಜೂನ್ಗೆ ಏರ್ಪೋರ್ಟ್ ಮೆಟ್ರೋ ಲೈನ್ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಶಾಂತಿನಗರದ ನಮ್ಮ ಮೆಟ್ರೋ ಕೇಂದ್ರ ಕಚೇರಿಯಲ್ಲಿ BMRCL ಅಧಿಕಾರಿಗಳ ಜತೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಜತೆ ಸಭೆ ನಡೆಸಿ ವಾಸ್ತವಾಂಶ ಪರಿಶೀಲನೆ ನಡೆಸಿದ್ದೇನೆ. ಮೆಟ್ರೋ ಕಿಲೋ ಮೀಟರ್, ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.
ದೆಹಲಿ ನಂತರ ಬೆಂಗಳೂರು ಮೆಟ್ರೋ ದೊಡ್ಡದು. ನಮ್ಮ ಮೆಟ್ರೋ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ. ಪ್ರಯಾಣಿಕರಿಂದ ನಮ್ಮ ಮೆಟ್ರೋಗೆ 48 ಕೋಟಿ ರೂಪಾಯಿ ಆದಾಯ ಬರುತ್ತಿದೆ. ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಪ್ರಸ್ತಾವನೆ ಆಗಿದೆ. ಮೂರನೇ ಹಂತದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೂ ಸರ್ವೆ ಆಗುತ್ತಿದೆ. ಜಾಹೀರಾತುಗಳಿಂದ ಆದಾಯ ಹೆಚ್ಚಿಸುವುದಕ್ಕೆ ಸಭೆಯಲ್ಲಿ ಕೆಲ ಸಲಹೆ, ಸೂಚನೆಗಳನ್ನು ನೀಡಿದ್ದೇವೆ ಎಂದರು.
ರಾಜ್ಯ ಹಾಗೂ ಕೇಂದ್ರಸರ್ಕಾರದ ಸಹಭಾಗಿತ್ವ ಇರೋದರಿಂದ ನಮ್ಮ ಮೆಟ್ರೋಗೆ ಕಡಿಮೆ ದರದಲ್ಲಿ ವಿದ್ಯುತ್ ಪಡೆಯಲು ಅವಕಾಶವಿದೆ. ಮೆಟ್ರೋಗೆ ವಿದ್ಯುತ್ ಬಳಕೆ ಸಂಬಂಧ ಕೆಲ ಬದಲಾವಣೆ ಮಾಡಲಾಗುತ್ತದೆ. ರಾತ್ರಿ 11 ಗಂಟೆಯಾದ್ರೂ ಮೆಟ್ರೋ ರೈಲಿನಲ್ಲಿ ಸಂಚರಿಸಲು ಜನ ಬರ್ತಿದ್ದಾರೆ ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಪ್ರಶ್ನೆಗೆ, ‘ಬೈಯ್ಯಪ್ಪನಹಳ್ಳಿ ಕೆ.ಆರ್ ಪುರಂ ಮೆಟ್ರೋ ಜುಲೈ ವೇಳೆಗೆ, ಕೆಂಗೇರಿ ಹಾಗೂ ಚಲಘಟ್ಟ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ, ನಾಗಸಂದ್ರ ಹಾಗೂ ಮಾದವಾರ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು.
ನೂತನ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ ರಸ್ತೆ ಮಾರ್ಗ ಅಕ್ಟೋಬರ್ ನವೆಂಬರ್ ವೇಳೆಗೆ ಆಗಲಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಮಾರ್ಗ 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರಂವರೆಗಿನ ಮಾರ್ಗ ಕೂಡ ಇದೇ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಕೇಳಿದಾಗ, ಕೇಂದ್ರ ಸರ್ಕಾರ ಇನ್ನು ಅನುಮತಿ ನೀಡಬೇಕಿದೆ. ಕೆಲವು ದಾಖಲೆಗಳನ್ನು ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ. ನಾನು ದೆಹಲಿಗೆ ಹೋಗಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಮೆಟ್ರೋ ಕಾಮಗಾರಿ ವಿಳಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇಂದಿನ ಚರ್ಚೆಯಲ್ಲಿ ಅಧಿಕಾರಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರಾತ್ರಿ ವೇಳೆ ಈ ಕಾಮಗಾರಿಗಳು ನಡೆಯುತ್ತಿವೆ. ಹಗಲಲ್ಲಿ ಸಿಮೆಂಟ್, ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸರ ಜತೆ ಸಭೆ ಮಾಡಬೇಕು. ಅದನ್ನು ಮಾಡುತ್ತೇನೆ. ಈ ವಿಚಾರದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.