ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಅನಾಥಾಶ್ರಮದಲ್ಲಿ ಊಟ ಸೇವಿಸಿದ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನಿಂಗ್ ಆಗಿದೆ. ವಿಷ ಪ್ರಾಶನದ ಪರಿಣಾಮ 6ನೇ ತರಗತಿಯ ವಿದ್ಯಾರ್ಥಿ ಕೆರ್ಲಾಂಗ್ (13) ಸಾವನ್ನಪ್ಪಿದ್ದು, 29 ಮಕ್ಕಳು ಅಸ್ವಸ್ಥರಾಗಿದ್ದಾರೆ.
ಉದ್ಯಮಿಯೊಬ್ಬರು ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಊಟ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಉಳಿದ ಊಟವನ್ನು ಟಿ.ಕಾಗೇಪುರ ಗ್ರಾಮದ ಬಳಿ ಇರುವ ಅನಾಥಾಶ್ರಮಕ್ಕೆ ನೀಡಲಾಗಿತ್ತು. ಅನಾಥಾಶ್ರಮದ ಮಕ್ಕಳು ಈ ಊಟ ಸೇವಿಸಿದ ಬಳಿಕ ಅವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಅನಾಹುತದ ಬಳಿಕ ಹೋಳಿ ಹಬ್ಬದ ಸಂದರ್ಭದಲ್ಲಿ ಊಟ ಸೇವಿಸಿದ್ದ ಕೆಲವು ಸಾರ್ವಜನಿಕರೂ ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಊಟದಲ್ಲಿ ವಿಷಾಂಶ ಇತ್ತೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಫುಡ್ ಪಾಯ್ಸನಿಂಗ್ ಕುರಿತು ಪ್ರಕರಣ ದಾಖಲಿಸಲಾಗಿದೆ. ಘಟನೆಯ ಪೂರ್ಣ ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದಕ್ಕೆ ಮಳವಳ್ಳಿಯಲ್ಲಿ ಡಿಎಚ್ಒ ಡಾ.ಮೋಹನ್ ಪ್ರತಿಕ್ರಿಯಿಸಿದ್ದು, ಮಾರ್ವಾಡಿಗಳು ಹೋಳಿ ಹಬ್ಬ ಪ್ರಯುಕ್ತ ಶುಕ್ರವಾರ ರಾತ್ರಿ ಊಟ ಮಾಡಿಸಿದ್ದರು. ಗೋಕುಲಂ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೂ ಅದೇ ಊಟ ವಿತರಿಸಲಾಗಿದೆ. ನೆನ್ನೆ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ವಾಂತಿ, ಬೇಧಿ ಶುರುವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಬಂದಿದ್ದರು. ಚೆನ್ನಾಗಿ ಓಡಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ದಿಢೀರಾಗಿ ಮೃತಪಟ್ಟಿದ್ದಾನೆ.
ಪೋಸ್ಟ್ ಮಾರ್ಟಮ್‌ನಲ್ಲಿ ಸಾವಿಗೆ ಕಾರಣ ನಿಖರವಾಗಿ ಗೊತ್ತಾಗಲಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ 27 ಮಂದಿ ಹೊರರಾಜ್ಯದವರಾಗಿದ್ದಾರೆ. ಇಬ್ಬರು ಸ್ಥಳೀಯ ವಿದ್ಯಾರ್ಥಿಗಳಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳು ಸದ್ಯ ಆರೋಗ್ಯವಾಗಿದ್ದಾರೆ. ಹಬ್ಬದ ಊಟ ಮಾಡಿಸಿ, ಸೇವಿಸಿದ್ದ ಮಾರ್ವಾಡಿಗಳಿಗೂ ವಾಂತಿ, ಭೇದಿ ಆಗಿದೆ. ಅವರು ಹಲವೆಡೆ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.