ಕನ್ನಡದ ಖ್ಯಾತ ಲೇಖಕ ಎಸ್ ಎಲ್ ಭೈರಪ್ಪ ಅವರ ‘ಪರ್ವ’ (Parva) ಕಾದಂಬರಿ ಆಧರಿಸಿ ಕಾಶ್ಮೀರಿ ಫೈಲ್ಸ್ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾ ಮೂಡಿ ಬರುತ್ತಿದೆ.
ಬೆಂಗಳೂರಿನಲ್ಲಿ ಶನಿವಾರ ಪರ್ವ ಚಿತ್ರದ ಟೈಟಲ್ ಅನೌನ್ಸ್ ಮಾಡಲಾಗಿದ್ದು, ಚಿತ್ರದಲ್ಲಿ ನಟ ಪ್ರಕಾಶ್ ಬೆಳವಾಡಿ ಹಾಗೂ ನಟಿ ಪಲ್ಲವಿ ಜೋಷಿ ಉಪಸ್ಥಿತರಿದ್ದರು.
ಕಾಶ್ಮೀರಿ ಫೈಲ್ಸ್ ಮತ್ತು ದಿ ವ್ಯಾಕ್ಸಿನ್ ವಾರ್ ನಂತಹ ಚಿತ್ರಗಳ ಮೂಲಕ ಗಮನ ಸೆಳೆದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ (Prakash Belawadi) ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಭಾಗಗಳಲ್ಲಿ ಬರುತ್ತದೆ ಎಂದು ಹೇಳಿದ್ದಾರೆ.
ಪಲ್ಲವಿ ಜೋಷಿ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ ಎಂದರು.
ಎಸ್.ಎಲ್. ಭೈರಪ್ಪ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ’ ಎಂದರು.