ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ಥವ್ಯ ಪಥದಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು. ಭಾರತೀಯ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಿಮಿತ್ತ ಈ ಬಾರಿ ʻಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿʼ ಥೀಮ್‌ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಯಿತು.
ಸೇನಾ ಪರೇಡ್ ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್ ಯುದ್ಧ ವೀರರು ಹಾಗೂ ಓರ್ವ ಅಶೋಕ ಚಕ್ರ ಪುರಸ್ಕೃತರು ಪರೇಡ್ ನಲ್ಲಿ ಭಾಗಿಯಾಗಿರುವುದು ವಿಶೇಷವಾಗಿತ್ತು. ಇದೇ ವೇಳೆ ಎಲ್ಲಾ ರಾಜ್ಯಗಳ ಸ್ತಬ್ಧ ಚಿತ್ರಗಳು ಆಯಾ ರಾಜ್ಯಗಳ ಹೆಮ್ಮೆಯ ಪ್ರತೀಕವಾಗಿದ್ದವು. ಅದರಲ್ಲೂ ಈ ಬಾರಿ ಮಧ್ಯಪ್ರದೇಶದ ಚೀತಾ ಯೋಜನೆ, ಉತ್ತರ ಪ್ರದೇಶದ ಮಹಾ ಕುಂಭಮೇಳ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಲಕ್ಪತಿ ದೀದಿ ಯೋಜನೆ ಬಿಂಬಿಸುವ ಟ್ಯಾಬ್ಲೊಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಸೇನಾ ಶಕ್ತಿ ಪ್ರದರ್ಶನ : ಪರೇಡ್‌ನಲ್ಲಿ 22 ಯುದ್ಧ ವಿಮಾನಗಳು, 11 ಸಾರಿಗೆ ವಿಮಾನಗಳು ಹಾಗೂ 7 ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 40 ವಿಮಾನಗಳು ಹತ್ತು ವಿಭಿನ್ನ ನೆಲೆಗಳಿಂದ ಹಾರಾಟ ನಡೆಸಿದವು. 130ಜೆ ಸೂಪರ್ ಹರ್ಕ’ಯುಲಸ್, ಸಿ-275, ಸಿ-17 ಗ್ರೋಬ್ ಮಾಸ್ಟರ್, ಪಿ-8ಐ, ಮಿಗ್-29 ಮತ್ತು ಸುಖೋಯ್-30, ಇತರ ವಿಮಾನಗಳು ದೇಶದ ಗರಿಮೆಗೆ ಸಾಕ್ಷಿಯಾದವು.
ಸಾಂಸ್ಕೃತಿಕ ಕಲಾ ಪ್ರದರ್ಶನ : ಇದೇ ಮೊದಲಬಾರಿಗೆ ಕರ್ತವ್ಯ ಪಥದಲ್ಲಿ 5,000 ಜನಪದ ಮತ್ತು ಬುಡಕಟ್ಟು ಕಲಾವಿದರು ತಮ್ಮದೇ ಆದ ಮೂಲ ಮತ್ತು ಅಧಿಕೃತ ವೇಷಭೂಷಣಗಳು, ಆಭರಣಗಳು, ಶಿರಸ್ತ್ರಾಣಗಳು ಮತ್ತು ಈಟಿಗಳು, ಕತ್ತಿಗಳು ಮತ್ತು ಡ್ರಮ್‌ಗಳಂತಹ ಸಾಂಪ್ರದಾಯಿಕ ಪರಿಕರಗಳೊಂದಿಗೆ ನೃತ್ಯ ಪ್ರದರ್ಶನ ಮಾಡಿದರು. ವಿಭಿನ್ನ ಸಂಸ್ಕೃತಿಗಳನ್ನು ಕಲೆಯಲ್ಲಿ ಪ್ರದರ್ಶಿಸಿದ್ದು ಆಕರ್ಷಕವಾಗಿತ್ತು.
ಬೈಕ್ ಸಿಗ್ನಲ್ ಕಾರ್ಪ್ಸ್ ತಂಡದಿಂದ ವಿಶಿಷ್ಟ ಸಾಹಸ : ಬೈಕ್ ಸಿಗ್ನಲ್ ಕಾರ್ಪ್ಸ್ ತಂಡ ಚಲಿಸುವ ಮೋಟಾರ್‌ಬೈಕ್ ತಂಡ ವಿಶಿಷ್ಠ ಸಾಧನೆಗೆ ಸಾಕ್ಷಿಯಾಯಿತು. ಬೈಕ್‌ನಲ್ಲಿ ಅಳವಡಿಸಲಾದ 12 ಅಡಿ ಏಣಿಯ ಮೇಲೆ ರಾಷ್ಟ್ರಪತಿಗಳಿಗೆ ಸೆಲ್ಯೂಟ್ ಸಲ್ಲಿಸಿದ ಮೊದಲ ಮಹಿಳಾ ಭಾರತೀಯ ಸೇನಾಧಿಕಾರಿ ಎಂಬ ವಿಶ್ವ ದಾಖಲೆಯನ್ನೂ ಬರೆಯಿತು. ಇದೇ ವೇಳೆ ʻತ್ರೀ ಪೀಕ್ ಡೆವಿಲ್ ರಚನೆʼ ಮೂಲಕ ಪ್ರೇಕ್ಷಕರ ಮನಗೆದ್ದಿತು.