ಕಾರವಾರ : ಗೋವು ಮತ್ತು ಜಾನುವಾರುಗಳ ಕಳವು, ಹತ್ಯೆ, ಕ್ರೌರ್ಯಗಳ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಗೋ ಕಳವು, ಹತ್ಯೆ ಮಾಡುವವರನ್ನು ರಸ್ತೆಯಲ್ಲಿ ಸರ್ಕಲ್ನಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಗುಂಡಿಕ್ಕಬೇಕು ಎಂದು ಹೇಳಿದ್ದಾರೆ.
ನಾವು ಪೂಜೆ ಮಾಡುವ ಪ್ರಾಣಿ ಗೋವು. ಅದನ್ನು ನಾವು ಬಹಳ ಪ್ರೀತಿಯಿಂದ ಸಾಕುತ್ತೇವೆ. ಅದರ ಹಾಲನ್ನು ಕುಡಿದು ನಾವು ಬದುಕುತ್ತಿದ್ದೇವೆ. ಪೊಲೀಸ್ ಇಲಾಖೆಯವರಿಗೆ ನೇರವಾಗಿ ಹೇಳಿದ್ದೇನೆ. ಅವರು, ಇವರು ಎಂದು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅಷ್ಟಾಗಿಯೂ ಕ್ರೌರ್ಯ ಮುಂದುವರಿದರೆ, ಬಹುಶಃ ಹೇಳಿದರೆ ತಪ್ಪಾಗಬಹುದೇನೋ, ರಸ್ತೆಯಲ್ಲಿ ಸರ್ಕಲಲ್ಲಿ ನಿಲ್ಲಿಸಿ ಗುಂಡುಹಾರಿಸುವಂತೆ ಮಾಡುತ್ತೇನೆ ಎಂದು ಮಂಕಾಳ ವೈದ್ಯ ಹೇಳಿದ್ದಾರೆ. ಮಂಕಾಳ ವೈದ್ಯರ ಹೇಳಿಕೆಯ ಪೂರ್ಣ ವಿಡಿಯೋ ಇಲ್ಲಿದೆ.
ಮಂಕಾಳು ವೈದ್ಯರ ಹೇಳಿಕೆ ವಿರುದ್ಧ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದು, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಈಗ ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ ಯಾವುದೆ ಭಯ, ರಾಗ, ದ್ವೇಷವಿಲ್ಲದೆ ಕಾನೂನಿನ ಪ್ರಕಾರ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದರು. ಈಗ ಕಾನೂನು ಕೈಗೆತ್ತಿಕೊಳ್ಳುವ ಮಾತನಾಡಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನಸಭಾ ಅಧ್ಯಕ್ಷ ಹಾಗೂ ರಾಜ್ಯಪಾಲರಿಗೆ ಅಬ್ದುಲ್ ಮಜೀದ್ ಮನವಿ ಮಾಡಿದ್ದಾರೆ.