ಹಾವೇರಿ : ಬಾಲಕನ ಕೆನ್ನೆಯ ಮೇಲೆ ಆದ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್ ಒಬ್ಬರು ಫೆವಿಕ್ವಿಕ್ ಹಾಕಿದ ವಿಚಿತ್ರ ಘಟನೆ ಹಾವೇರಿ ಜಿಲ್ಲೆಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆಟ ಆಡುವಾಗ ಬಿದ್ದು 7 ವರ್ಷದ ಗುರುಕಿಶನ್ ಕೆನ್ನೆಗೆ ಗಾಯವಾಗಿದ್ದು, ಗುರುಕಿಶನ್ನನ್ನು ಚಿಕಿತ್ಸೆಗೆಂದು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಷಕರು ಕರೆದೊಯ್ದಿದ್ದರು. ಕರ್ತವ್ಯದಲ್ಲಿದ್ದ ನರ್ಸ್ ಜ್ಯೋತಿ ಚಿಕಿತ್ಸೆ ನೀಡುವಾಗ ಕೆನ್ನೆಗೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದಾರೆ.
ಇದು ಪೋಷಕರ ಗಮನಕ್ಕೆ ಬಂದು ಏಕೆ ಹೀಗೆ ಮಾಡಿದ್ರಿ ಎಂದು ದಾದಿಯನ್ನು ಕೇಳಿದಾಗ, ಕೆನ್ನೆಗೆ ಸ್ಟಿಚ್ ಹಾಕಿದ್ರೆ ಕಲೆ ಆಗುತ್ತದೆ. ಅದಕ್ಕೆ ಫೆವಿಕ್ವಿಕ್ ಹಾಕಿದ್ದೇನೆ. ಕಳೆದ ಐದು ವರ್ಷದಿಂದ ಇದನ್ನೇ ಮಾಡುತ್ತಿದ್ದೇನೆ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ.
ಇದರಿಂದ ಕಂಗಾಲಾದ ಪೋಷಕರು, ಆರೋಗ್ಯ ಕೇಂದ್ರದ ರಕ್ಷಣಾ ಸಮಿತಿಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಹಾನಗಲ್ ಡಿಹೆಚ್ಓ ಎಚ್ಚೆತ್ತು ವರದಿ ಪಡೆದು ಕ್ರಮ ಜರುಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.