ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್, ಇಂದು (ಫೆಬ್ರವರಿ 07) ಆದೇಶ ಪ್ರಕಟಿಸಲಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ಇಂದು ಬೆಳಗ್ಗೆ 10.30ಕ್ಕೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಕೋರ್ಟ್​ ತೀರ್ಪು ಏನು ನೀಡುತ್ತೋ ಎನ್ನುವ ಢವಢವ ಸಿದ್ದರಾಮಯ್ಯನವರಿಗೆ ಶುರುವಾಗಿದೆ.

ಸಿದ್ದರಾಮಯ್ಯ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದರು. ಇನ್ನು ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಮಣೀಂದ್ರ್ ಸಿಂಗ್ ಅವರು ವಾದ ಮಂಡಿಸಿದ್ದರು.

ಇಂದು ಬಿಎಸ್​ವೈ ವಿರುದ್ಧದ ಪೋಕ್ಸೋ ಕೇಸ್ ತೀರ್ಪು : ಅತ್ತ ಧಾರವಾಡ ಹೈಕೋರ್ಟ್​ ಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 07) ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ತೀರ್ಪು ಹೊರಬೀಳಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ನೀಡಲಿದೆ.

ಈ ಪ್ರಕರಣ ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು. ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ನೀಡಲಿದೆ. ನಿರೀಕ್ಷಣಾ ಜಾಮೀನು ಬಗ್ಗೆಯೂ ತೀರ್ಮಾನಿಸಲಿದೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಿಎಂ ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣದ ದೋಷಾರೋಪ ಪಟ್ಟಿಯನ್ನು ಈಗಾಗಲೇ ಸಿಐಡಿ ಪೊಲೀಸರು ದಾಖಲಿಸಿದ್ದಾರೆ. ಈವರೆಗೆ ಖುದ್ದು ಹಾಜರಾತಿಯಿಂದ ಬಿಎಸ್‌ವೈಗೆ ಕೋರ್ಟ್​ ಅನುಮತಿ ನೀಡಿತ್ತು. ಅಲ್ಲದೇ ಬಂಧನದಿಂದಲೂ ಮಧ್ಯಂತರ ರಕ್ಷಣೆ ಮಾಡಿತ್ತು.

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರು ಕರ್ನಾಟಕದ ಹಿರಿಯ ರಾಜಕಾರಣಿಗಳು. ಹೀಗಾಗಿ ಇಂದು ಕೋರ್ಟ್ ತೀರ್ಪು ಇವರ ಭವಿಷ್ಯ ನಿರ್ಧರಿಸಲಿದೆ. ಇನ್ನು ಈ ಇಬ್ಬರು ನಾಯಕರ ಅಭಿಮಾನಿಗಳ ಚಿತ್ತ ಕೋರ್ಟ್​ನತ್ತ ನೆಟ್ಟಿದ್ದು, ತೀರ್ಪು ಏನು ಬರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *