ಬೆಂಗಳೂರು : ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್ನವರ ಅಟ್ಟಹಾಸಕ್ಕೆ ಕೊನೆಗೂ ಲಗಾಮು ಬಿದ್ದಿದೆ. ಆ ಮೂಲಕ ಸರ್ಕಾರದ ಅಸ್ತ್ರ ಸುಗ್ರೀವಾಜ್ಞಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅಂಕಿತ ಹಾಕಿದ್ದಾರೆ. ಜೊಗೆ ಹಲವು ಸಲಹೆಗಳನ್ನು ನೀಡಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಬೇಕು ಅಂತಾ ಹೊರಟ ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿತ್ತು. ಕಠಿಣ ಕಾನೂನು ರೂಪಿಸಿ ರಾಜ್ಯಪಾಲರಿಗೆ ರವಾನಿಸಿದ್ದರು. ಆದರೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಸಿದ್ದ ರಾಜ್ಯಪಾಲರು, ಸರ್ಕಾರಕ್ಕೆ ವಾಪಸ್ ಕಳಿಸಿದ್ದರು. ಇದರಲ್ಲಿರುವ ಅಂಶಗಳನ್ನ ನೋಡಿದರೆ ಮುಂದಿನ ದಿನಗಳಲ್ಲಿ ಮಾರಕ ಆಗಲಿದೆ ಅನ್ನೋ ಕಾರಣ ನೀಡಿ ಸರ್ಕಾರ ಸ್ಪಷ್ಟನೆ ಕೇಳಿ ವಾಪಸ್ ಮಾಡಿದ್ದರು.
ಅಷ್ಟೇ ಅಲ್ಲ ಬಜೆಟ್ ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸಿ ಅಂತಾ ಹೇಳಿದ್ದ ರಾಜ್ಯಪಾಲರು, ಈಗಿರುವ ಕಾನೂನುಗಳಲ್ಲೇ ಪೊಲೀಸರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ ಅಂತಾ ಪೊಲೀಸ್ ವ್ಯವಸ್ಥೆ ಬಗ್ಗೆಯೂ ಅಸಮಾಧನ ಹೊರಹಾಕಿದ್ದರು. ಮೈಕ್ರೋ ಫೈನಾನ್ಸ್ ವಿರುದ್ಧ ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ ಅಂತಾ ಖಡಕ್ ಸಂದೇಶ ರವಾನಿಸಿ ಸುಗ್ರೀವಾಜ್ಞೆ ವಾಪಸ್ ಮಾಡಲಾಗಿತ್ತು.
ರಾಜ್ಯಪಾಲರು ತಪ್ಪುಗ್ರಹಿಕೆಯಿಂದ ಈ ನಿರ್ಧಾರ ಕೈಕೊಂಡಿದ್ದಾರೆ ಎಂದಿದ್ದ ಕಾನೂನು ಸಚಿವ ಹೆಚ್‌ಕೆ ಪಾಟೀಲ್, ಸುಗ್ರೀವಾಜ್ಞೆ ಪುರಸ್ಕರಿಸುವಂತೆ ಕರಡು ಪ್ರತಿಯನ್ನ ಮರು ಸಲ್ಲಿಕೆ ಮಾಡುತ್ತೇವೆ ಎಂದಿದ್ದರು. ಅದರಂತೆಯೇ ನಿನ್ನೆ ಸರ್ಕಾರ ಮತ್ತೊಮ್ಮೆ ರಾಜ್ಯಪಾಲರ ಅಂಗಳಕ್ಕೆ ಸುಗ್ರೀವಾಜ್ಞೆ ಕರಡು ರವಾನೆ ಮಾಡಿತ್ತು. ಈ ಭಾರಿ ಸುಗ್ರೀವಾಜ್ಞೆಯಲ್ಲಿ ಯಾವುದೇ ಬದಲಾವಣೆ ಮಾಡದೆಯೇ ಕರಡು ರವಾನಿಸಲಾಗಿತ್ತು. ಅತಿ ಅಗತ್ಯತೆಯ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯನ್ನು ಅನುಮೋದಿಸಲು ಸರ್ಕಾರ ಮನವಿ ಮಾಡಿತ್ತು ಎನ್ನಲಾಗಿದೆ.