ಅಲಹಾಬಾದ್ : ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ, 17 ವರ್ಷದ ಬಾಲಕಿಗೆ ಮಗುವನ್ನು ಇಟ್ಟುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡಿರುವ ಅಲಹಾಬಾದ್ ಹೈಕೋರ್ಟ್ ತಾನು ತಾಯಿಯಾಗಬೇಕೇ ಅಥವಾ ಗರ್ಭಪಾತ ಮಾಡಿಸಿಕೊಳ್ಳಬೇಕೇ ಎಂಬುದನ್ನು ನಿರ್ಧರಿಸಲು ಅವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದೆ.
ಅತ್ಯಾಚಾರದಿಂದ ಯುವತಿ ಅಥವಾ ಮಹಿಳೆ ಗರ್ಭಿಣಿಯಾದರೆ ಆ ಮಗುವನ್ನು ಉಳಿಸಿಕೊಳ್ಳಬೇಕೇ, ಬೇಡವೇ ಎಂದು ನಿರ್ಧರಿಸಲು ಆಕೆಗೆ ಹಕ್ಕಿದೆ. ಕಾನೂನು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ತನ್ನ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಹಕ್ಕನ್ನು ಒದಗಿಸುತ್ತದೆ ಎಂದು ಕೋರ್ಟ್ ಹೇಳಿದೆ.
ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 3(2) ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ತನ್ನ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸುವ ಹಕ್ಕನ್ನು ಒದಗಿಸುತ್ತದೆ. ಆಕೆಗೆ ವೈದ್ಯಕೀಯವಾಗಿ ಗರ್ಭಪಾತವನ್ನು ಮಾಡಿಸಿಕೊಳ್ಳುವ ಅಥವಾ ಆ ಮಗುವನ್ನು ಹೆತ್ತು ಅದರ ಜವಾಬ್ದಾರಿ ವಹಿಸಿಕೊಳ್ಳುವ ಎರಡೂ ಹಕ್ಕುಗಳಿರುತ್ತದೆ.
ಆಕೆಯ ಮಾತೃತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಹಕ್ಕನ್ನು ನಿರಾಕರಿಸುವುದು ಅವಳ ಘನತೆಯಿಂದ ಬದುಕುವ ಮಾನವ ಹಕ್ಕನ್ನು ನಿರಾಕರಿಸುವುದಕ್ಕೆ ಸಮಾನವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಒಂದುವೇಳೆ ಆ ಮಗುವನ್ನು ಆಕೆ ಹೆರಲೇಬೇಕೆಂದು ಒತ್ತಾಯಿಸಿದರೆ ಅದು ಆಕೆಗೆ ಜೀವನಪರ್ಯಂತ ನೋವು, ದುಃಖ ನೀಡುವ ಸಂಗತಿಯಾಗುವುದರಿಂದ ಕೋರ್ಟ್ ಈ ತೀರ್ಪು ನೀಡಿದೆ ಎಂದು ನ್ಯಾಯಪೀಠ ಹೇಳಿದೆ.
17 ವರ್ಷದ ಬಾಲಕಿ ನೀಡಿದ ದೂರಿನ ಅನ್ವಯ, ಆಕೆ ಪ್ರೀತಿಸುತ್ತಿದ್ದ ಆರೋಪಿಯು ತನ್ನೊಂದಿಗೆ ಮನೆ ಬಿಟ್ಟು ಬರುವಂತೆ ಆಮಿಷವೊಡ್ಡಿದ್ದ. ಆದರೆ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಬಳಿಕ ಅವಳಿಂದ ದೂರವಾಗಿದ್ದ. ನಂತರ ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಆಕೆಗೆ ಪೊಲೀಸರು ಆಕೆಯನ್ನು ಪತ್ತೆಹಚ್ಚಿದ್ದರು. ಆದರೆ, ತೀವ್ರ ಹೊಟ್ಟೆನೋವಿನಿಂದ ಆಕೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಾಗ ಆಕೆ ಮೂರೂವರೆ ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಯಿತು. ಆಕೆ ತಾನು ನಂಬಿ ಹೋದ ಪ್ರೇಮಿ ಪದೇಪದೆ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಿದ್ದಾಳೆ.
ಆದರೆ, ಆಕೆಯಿನ್ನೂ ಅಪ್ರಾಪ್ತೆಯಾಗಿರುವ ಕಾರಣದಿಂದ ತಾನು ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ಅವಳು ಕೋರ್ಟ್ ಮೆಟ್ಟಿಲೇರಿದ್ದಳು. ಅವಳು ಈಗ 19 ವಾರಗಳ ಗರ್ಭಿಣಿಯಾಗಿದ್ದಾಳೆ. ಈ ಗರ್ಭಧಾರಣೆಯು ತನಗೆ ದುಃಖವನ್ನು ಉಂಟುಮಾಡುತ್ತಿದೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ವಾದದಲ್ಲಿ ತಿಳಿಸಲಾಗಿತ್ತು.
ಇಂತಹ ಪ್ರಕರಣಗಳಲ್ಲಿ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಲೈಂಗಿಕ ದೌರ್ಜನ್ಯದಿಂದ ಗರ್ಭ ಧರಿಸಿದ ಮಹಿಳೆ ಆ ಮಗುವನ್ನು ಇಟ್ಟುಕೊಳ್ಳುವುದಕ್ಕೆ ಒಪ್ಪುವ ಅಥವಾ ನಿರಾಕರಿಸುವ ಹಕ್ಕನ್ನು ಹೊಂದಿದ್ದಾಳೆ. ಆ ಮಗುವನ್ನು ಇಟ್ಟುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಆ ಮಹಿಳೆಯೇ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದೆ.