ಬೆಂಗಳೂರು : ಬೆಂಗಳೂರು ಹೊರತಾಗಿ ರಾಜ್ಯದ 2ನೇ ಹಾಗೂ 3ನೇ ಹಂತದ ನಗರಗಳತ್ತ ಮುಖ ಮಾಡಿದ್ದು, ನಮ್ಮ ಸರ್ಕಾರ ನಿಮಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉದ್ಯಮಿಗಳಿಗೆ ಸಲಹೆ ನೀಡಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಚಿವರಾದ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ನೂತನ ಕೈಗಾರಿಕಾ ನೀತಿ ರೂಪಿಸಿದ್ದಾರೆ. ಆ ಮೂಲಕ ಅನೇಕ ಕಾರ್ಯಕ್ರಮ ನಿಮಗಾಗಿ ರೂಪಿಸಲಾಗಿದೆ. ನೀವು ಬೆಂಗಳೂರಿನ ಬಗ್ಗೆ ಹೆಚ್ಚು ಗಮನಹರಿಸಬೇಡಿ. ಬೆಂಗಳೂರು ಹೊರತಾಗಿ ಎರಡನೇ ಹಾಗೂ ಮೂರನೇ ಹಂತದ ನಗರಗಳತ್ತ ಗಮನಹರಿಸಬೇಕು ಎಂದರು.
ನಂಜುಂಡಪ್ಪ ಅವರ ವರದಿ ಆಧಾರದ ಮೇಲೆ ಹಿಂದುಳಿದ ತಾಲೂಕುಗಳನ್ನು ಗುರುತಿಸಲಾಗಿದ್ದು, ಅಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅನೇಕ ಪ್ರೋತ್ಸಾಹ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ತಾಲೂಕು ಮಟ್ಟದಲ್ಲಿ ಕೈಗಾರಿಕಾ ಪ್ರದೇಶ ರೂಪಿಸುವ ಉದ್ದೇಶವಿದ್ದು, ಎಲ್ಲೆಡೆ ನೀರು ಹಾಗೂ ವಿದ್ಯುತ್ ಸೌಲಭ್ಯ ನೀಡಲಾಗುವುದು. ಈ ನೂತನ ನೀತಿಯಲ್ಲಿ ದೊಡ್ಡ ಉದ್ಯಮಗಿಳಿಗಿಂತ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ನೆರವಿನ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಇಲ್ಲಿರುವ ಎಲ್ಲಾ ಉದ್ಯಮಿಗಳು ನಮ್ಮ ರಾಜ್ಯದ ಆಸ್ತಿ. ನೀವು ಬಲಿಷ್ವಾದಷ್ಟು ನಾವು ಬಲಿಷ್ಠವಾಗಿರುತ್ತದೆ. ನೀವು ದುರ್ಬಲವಾದರೆ ನಾವು ದುರ್ಬಲವಾಗುತ್ತೇವೆ ಎಂದು ನಮ್ಮ ಸರ್ಕಾರ ನಂಬಿದೆ. ನಮ್ಮ ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 1 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಿರುವುದು ನಮ್ಮ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು. ನೀವೆಲ್ಲರೂ ಸರ್ಕಾರಕ್ಕೆ ನೆರವಾಗುತ್ತಿದ್ದೀರಿ ಎಂದು ತಿಳಿಸಿದರು.
ನಮ್ಮ ರಾಜ್ಯಕ್ಕೆ ದೊಡ್ಡ ಇತಿಹಾಸವಿದೆ. ನೆಹರೂ ಅವರ ಕಾಲದಿಂದ ನೋಡುತ್ತಿದ್ದೀರಿ. ಸ್ವಾತಂತ್ರ್ಯಕ್ಕೂ ಮುನ್ನ ಇಡೀ ಏಷ್ಯಾದಲ್ಲೇ ಮದಲು ವಿದ್ಯುತ್ ಉತ್ಪಾದನೆ ಮಾಡಿದ್ದು 1904ರಲ್ಲಿ ಶಿವನಸಮುದ್ರದಲ್ಲಿ ಅಲ್ಲಿಂದ ಕೆಜಿಎಫ್ ಗೆ ರವಾನೆಯಾಯಿತು. ನಂತರ ಅದೇ ವರ್ಷ ಬೆಂಗಳೂರಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಇನ್ನು ಬಾಹ್ಯಾಕಾಶ ಯೋಜನೆ ಮೊದಲು ರೂಪಿಸಿದ್ದು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಎಎಲ್, ಐಐಟಿ, ಏರ್ ಫೋರ್ಸ್, ಬಿಹೆಚ್ ಇಎಲ್ ಸೇರಿದಂತೆ ದೊಡ್ಡ ಸಂಸ್ಥೆಗಳನ್ನು ಬೆಂಗಳೂರಿನಲ್ಲಿ ಆರಂಭಿಸಲಾಯಿತು ಎಂದು ಹೇಳಿದರು.
ನಮ್ಮಲ್ಲಿರುವ ಹವಾಗುಣ, ನಮ್ಮಲ್ಲಿರುವ ಪ್ರತಿಭೆ, ಮಾನವ ಸಂಪನ್ಮೂಲ, ಶೈಕ್ಷಣಿಕ ಗುಣಮಟ್ಟ, ಕೌಶಲ್ಯ ಭಾರತದ ಬೇರೆ ಪ್ರದೇಶದಲ್ಲಿ ಇಲ್ಲ. ಒಂದು ವರ್ಷ ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿದರೆ, ಮತ್ತೊಂದು ವರ್ಗ ಸಣ್ಣದಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಯಾರೂ ಆರಂಭದಲ್ಲೇ ದೊಡ್ಡದಾಗಿ ಬೆಳೆಯುವುದಿಲ್ಲ. ಆರಂಭದಿಂದ ಸಣ್ಣ ಹೆಜ್ಜೆ ಇಟ್ಟುಕೊಂಡು ಹೋಗುತ್ತಾರೆ. ಉದ್ಯೋಗಿಗಳಿಗಿಂತ ಉದ್ಯೋಗದಾತರರಿಗೆ ನಾವು ಹೆಚ್ಚಿನ ಶಕ್ತಿ ತುಂಬಬೇಕು ಎಂದು ನಾನು ಕೋವಿಡ್ ಸಮಯದಲ್ಲಿ ಹೇಳಿದ್ದೆ. ನಿಮಗೆ ಕಡಿಮೆ ದರದಲ್ಲಿ ಜಮೀನು, ಕಡಿಮೆ ಬಡ್ಡಿ ಸಾಲ ಸೇರಿದಂತೆ ಅನೇಕ ಪ್ರೋತ್ಸಾಹಗಳನ್ನು ಸರ್ಕಾರ ನೀಡಬೇಕು ಎಂದರು.