ಬೆಂಗಳೂರು : ನಾಡಪ್ರಭು ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರು ನಗರದ ಅಸ್ತಿತ್ವ ಕಳೆದು ಹೋಗುತ್ತಿದೆ. ಕೆಂಪೇಗೌಡರು ಕಟ್ಟಿದ ನಾಡಿನ ಒಳಿತಿಗಾಗಿ ಈಗಿರುವ ಬೆಂಗಳೂರು ನಗರ ಉಸ್ತುವಾರಿ ಸಚಿವರನ್ನು ಬದಲಿಸಿ, ಬೇರೊಬ್ಬರನ್ನು ನೇಮಕ ಮಾಡಿ ಎಂದು ಬಿಜೆಪಿ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಆಯವ್ಯಯದಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನದ ಕುರಿತು ಈಗಾಗಲೇ ವ್ಯವಹಾರ ಕುದುರಿಸಲಾಗಿದೆ. ಆಂಧ್ರ ಪ್ರದೇಶದ ಗುತ್ತಿಗೆದಾರರು ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡುತ್ತಿದ್ದಾರೆ. ನಗರಕ್ಕೆ ಸಿಗುವ ಅನುದಾನದಲ್ಲಿ ಶೇಕಡಾ 35ರಷ್ಟು ನೀಡುವುದಾಗಿ ವ್ಯವಹಾರ ಮಾತುಕತೆ ನಡೆದಿದೆ. ಈಗಾಗಲೇ ಶೇ.12ರಷ್ಟು ಮುಂಗಡ ಹಣವನ್ನು ನೀಡಿದ್ದಾರೆ. ಕಾರ್ಯಾದೇಶ ಕೊಟ್ಟ ನಂತರ ಶೇ.8 ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಶೇ.15 ಒಟ್ಟಾರೆ ಸುಮಾರು ಶೇ.35ರಷ್ಟು ಹಣ ನೀಡುವ ಬಗ್ಗೆ ವ್ಯವಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಹೀಗಾಗಿ, ನಗರಕ್ಕೆ ನೀಡಲಾಗುವ ಅನುದಾನವನ್ನು ತಮ್ಮ ನೇತೃತ್ವದಲ್ಲೇ ಬೆಂಗಳೂರು ನಗರದ ಎಲ್ಲಾ ಶಾಸಕರನ್ನು ಕರೆದು ಸಭೆ ಮಾಡಿ ಅನುದಾನವನ್ನು ತಾವೇ ನೇರವಾಗಿ ನಗರದ ಕ್ಷೇತ್ರಗಳಿಗೆ ಘೋಷಣೆ ಮಾಡಬೇಕೆಂದು ಕೋರಿದ್ದಾರೆ.‌ ಮುನಿರತ್ನ ಬರೆದಿರುವ ಪತ್ರದಲ್ಲಿರುವ ಅಂಶಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮುಖ್ಯವಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಟಾರ್ಗೆಟ್‌ ಮಾಡಿಕೊಂಡು ಅವರು ಪತ್ರ ಬರೆದಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವರನ್ನಾಗಿ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್, ಕೃಷ್ಣ ಬೈರೇಗೌಡ ಇಲ್ಲವೇ ದಿನೇಶ್ ಗುಂಡೂರಾವ್ ಅವರನ್ನು ಮಾಡಿ / ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಎರಡು ವರ್ಷಗಳಿಂದ ಆಗಿರುವ ಕಳಂಕವನ್ನು ತೊಳೆಯಬಹುದು. ಈಗ ಭ್ರಷ್ಟಾಚಾರ ಜಾಸ್ತಿಯಾಗಿದೆ. ನಿಮ್ಮ ನೇತೃತ್ವದಲ್ಲಿ ಬೆಂಗಳೂರಿನ ಎಲ್ಲಾ ಶಾಸಕರನ್ನು ಕರೆದು ಸಭೆ ಮಾಡಿ, ಅನುದಾನ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಮುನಿರತ್ನ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *