ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ನೂತನ ಕಚೇರಿ ‘ಕೇಶವ್ ಕುಂಜ್’ ಅನ್ನು ಇಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉದ್ಘಾಟಿಸಿ, ನಂತರ ಮಾತನಾಡಿದ ಅವರು, ‘ಆರ್ಎಸ್ಎಸ್ ಕೆಲಸವು ದೇಶಾದ್ಯಂತ ವೇಗವನ್ನು ಪಡೆಯುತ್ತಿದೆ ಮತ್ತು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ನಮ್ಮ ಕೆಲಸವು ಈ ಕಟ್ಟಡದಂತೆಯೇ ಭವ್ಯವಾಗಿರಬೇಕು. ನಮ್ಮ ಕೆಲಸವು ಆ ಭವ್ಯತೆಯನ್ನು ಪ್ರತಿಬಿಂಬಿಸಬೇಕು.
ಈ ಕೆಲಸವು ಭಾರತವನ್ನು ಮತ್ತೆ ವಿಶ್ವಗುರುವಿನ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ನಮಗಿದೆ. ಭಾರತ ಶೀಘ್ರದಲ್ಲೇ ವಿಶ್ವಗುರುವಾಗುತ್ತದೆ. ನಾವು ಇದನ್ನು ನಮ್ಮ ಜೀವಿತಾವಧಿಯಲ್ಲಿ ನೋಡುತ್ತೇವೆ ಎಂಬ ವಿಶ್ವಾಸ ನಮಗಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಶ್ರೀ ರಾಮ ಜನ್ಮಭೂಮಿ ನ್ಯಾಸ್ ಖಜಾಂಚಿ ಪೂಜ್ಯ ಗೋವಿಂದದೇವ್ ಗಿರಿ ಜೀ ಮಹಾರಾಜ್ ಅವರು ತಮ್ಮ ಆಶೀರ್ವಚನದಲ್ಲಿ, ‘ಇಂದು ಪವಿತ್ರ ದಿನವಾಗಿದೆ. ಏಕೆಂದರೆ ಇದು ಶ್ರೀ ಗುರೂಜಿ ಮತ್ತು ಸಂಘದ ಸೈದ್ಧಾಂತಿಕ ಶಕ್ತಿಯನ್ನು ಪ್ರತಿನಿಧಿಸುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಾಗಿದೆ. ನಾವು ಹಿಂದೂ ಭೂಮಿಯ ಮಕ್ಕಳು. ಆರ್ಎಸ್ಎಸ್ ಯಾವಾಗಲೂ ಭಾರತದ ಸಂಪ್ರದಾಯದ ಮಾರ್ಗದಲ್ಲಿ ದೇಶದ ಪ್ರಗತಿಯ ಬಗ್ಗೆ ಮಾತನಾಡುತ್ತದೆ’ ಎಂದು ಹೇಳಿದರು.
ಕೇಶವ ಕುಂಜ್ ಉದ್ಘಾಟನಾ ಸಮಾರಂಭದಲ್ಲಿ ಕೇಶವ ಸ್ಮಾರಕ ಸಮಿತಿಯ ಅಧ್ಯಕ್ಷ ಅಲೋಕ್ ಕುಮಾರ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತರಿದ್ದರು.
ಹೊಸ ಆರ್ಎಸ್ಎಸ್ ಕಚೇರಿಯ ವಿಶೇಷತೆಗಳೇನು? : ಹೊಸ ಆರ್ಎಸ್ಎಸ್ ಕಚೇರಿಯು ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪವನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಂಯೋಜಿಸುತ್ತದೆ. ಈ ಕಟ್ಟಡವು ಸುಮಾರು 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಗೋಪುರ, ಸಭಾಂಗಣ, ಗ್ರಂಥಾಲಯ, ಆಸ್ಪತ್ರೆ ಮತ್ತು ಹನುಮಾನ್ ದೇವಾಲಯವನ್ನು ಒಳಗೊಂಡಿದೆ.
ಈ ಬೃಹತ್ ಕಟ್ಟಡವನ್ನು ಸಾರ್ವಜನಿಕ ದೇಣಿಗೆಯಿಂದ ನಿರ್ಮಿಸಲಾಗಿದ್ದು, ಇದಕ್ಕೆ 75,000ಕ್ಕೂ ಹೆಚ್ಚು ಜನರು ದೇಣಿಗೆ ನೀಡಿದ್ದಾರೆ. ಇದರ ನಿರ್ಮಾಣ ಕಾರ್ಯಕ್ಕೆ ಸುಮಾರು 8 ವರ್ಷಗಳು ಬೇಕಾಯಿತು. ಈ ಕಟ್ಟಡದ ಒಟ್ಟು ವೆಚ್ಚ ಸುಮಾರು 150 ಕೋಟಿ ರೂ.
ಈ ಹೊಸ ಆರ್ಎಸ್ಎಸ್ ಕಚೇರಿಯನ್ನು ಗುಜರಾತ್ನ ಪ್ರಸಿದ್ಧ ವಾಸ್ತುಶಿಲ್ಪಿ ಅನೂಪ್ ದೇವ್ ವಿನ್ಯಾಸಗೊಳಿಸಿದ್ದಾರೆ. ಇದು ಉತ್ತಮ ಗಾಳಿ ಮತ್ತು ನೈಸರ್ಗಿಕ ಬೆಳಕನ್ನು ನೀಡುತ್ತದೆ.
ಈ ಮೂರು ಗೋಪುರಗಳಿಗೆ ‘ಸಾಧನಾ’, ‘ಪ್ರೇರಣ’ ಮತ್ತು ‘ಅರ್ಚನಾ’ ಎಂದು ಹೆಸರಿಡಲಾಗಿದೆ. ಆರ್ಎಸ್ಎಸ್ ಕಚೇರಿಯನ್ನು ಪ್ರವೇಶಿಸಿದ ತಕ್ಷಣ, ‘ಸಾಧನಾ’ ಗೋಪುರ ಮೊದಲು ಬರುತ್ತದೆ, ನಂತರ ‘ಪ್ರೇರಣ’ ಗೋಪುರ ಮತ್ತು ಅಂತಿಮವಾಗಿ ‘ಅರ್ಚನಾ’ ಗೋಪುರ ಸಿಗುತ್ತದೆ.