ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಎರಡು ಅಂತಸ್ತಿನ ಮನೆ ಉರುಳಿಬಿದ್ದಿದೆ. ಭೀವನ್ ಭೀಮಾ ನಗರದ ತಿಪ್ಪಸಂದ್ರದಲ್ಲಿ ಈ ಘಟನೆ ನಡೆದಿದೆ.
ಮತ್ತೊಂದು ಕಟ್ಟಡಕ್ಕೆ ಪಾಯ ತೆಗೆಯುತ್ತಿದ್ದ ವೇಳೆ ಪಕ್ಕದಲ್ಲಿದ್ದ ಎರಡು ಅಂತಸ್ತಿನ ಮನೆ ಕುಸಿದುಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದು, ಮನೆಯಲ್ಲಿದ್ದ ಎಲ್ಲರನ್ನೂ ಹೊರ ಕಳುಹಿಸಿದ್ದಾರೆ. ಇನ್ನು ಮನೆಯೊಳಗೆ ಯಾರಾದರೂ ಸಿಲುಕಿದ್ದಾರಾ ಎನ್ನುವುದನ್ನು ಪರಿಶೀಲನೆ ನಡೆಸಿದ್ದಾರೆ.
ಬಿಲ್ಡಿಂಗ್ ನ ಗ್ರೌಂಡ್ ಫ್ಲೋರ್ ನಲ್ಲಿದ್ದ ವಿಳಕ್ಕು ಹ್ಯಾಂಡಿಕ್ರಾಪ್ಟ್ ಸ್ಟೋರ್ ಎಂಬ ಅಂಗಡಿಗೂ ಸಹ ಹೆಚ್ಚು ಹಾನಿಯಾಗಿದೆ. ಈ ಎರಡು ಅಂತಸ್ತಿನ ಕಟ್ಟಡದಲ್ಲಿ ಐದು ಮನೆಗಳು ಇದ್ದು, ನೆನ್ನೆ ಸಂಜೆ ಇದ್ದಕ್ಕಿದ್ದಂತೆ ಕಟ್ಟಡ ಕುಸಿದಿದೆ. ಆ ವೇಳೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ.
ಬೇಸ್ಮೆಂಟ್ ನಲ್ಲಿದ್ದ ಐದಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಕಟ್ಟಡದಲ್ಲಿ ಯಾರು ಸಿಲುಕಿಲ್ಲ ಎನ್ನುವುದು ಗೊತ್ತಾಗಿದೆ. ಕಟ್ಟಡ ಕುಸಿತ ವೇಳೆ ಆರು ಜನರು ಇದ್ದರು. ಅವರೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಯಾವುದೇ ಕ್ಷಣದಲ್ಲೂ ಕಟ್ಟಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಹೀಗಾಗಿ ಮನೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಕಟ್ಟಡದ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಯಾಯ ತೋಡಿದ್ದೆ ಕಟ್ಟಡ ಕುಸಿಯಲು ಕಾರಣ ಎಂದು ಹೇಳಲಾಗುತ್ತಿದೆ.