ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಅದು ಯಾವತ್ತೂ ವಿಶೇಷವೇ. ಇಲ್ಲಿ ಯಾವುದು ಬಲಿಷ್ಠ, ಯಾವುದು ಕನಿಷ್ಠ ಎಂಬಿತ್ಯಾದಿ ಪ್ರಶ್ನಗಳು ಉದ್ಭವಿಸುವುದೇ ಇಲ್ಲ. ಎರಡೂ ತಂಡಗಳ ಆಟಗಾರರು ಉತ್ಸಾಹದಲ್ಲಿರುತ್ತಾರೆ. ಅದೇ ರೀತಿ ಎರಡೂ ತಂಡಗಳ ಮೇಲೆ ಅತೀವ ಒತ್ತಡವೂ ಇರುತ್ತದೆ. ಈ ಒತ್ತಡವನ್ನು ಮೀರಿ ನಿಂತು ಉತ್ತಮ ಪ್ರದರ್ಶನ ತೋರಿದವರೇ ಇಲ್ಲಿ ವಿಜಯ ಶಾಲಿಗಳಾಗುತ್ತಾರೆ.
ಐಸಿಸಿ ಏಕದಿನ ವಿಶ್ವಕಪ್ ನ ವಿಚಾರಕ್ಕೆ ಬಂದಾಗ ಇತ್ತಂಡಗಳಲ್ಲಿ ಭಾರತದ್ದೇ ಪಾರಮ್ಯ, ಭಾರತವೇ ಸಾರ್ವಭೌಮ. ಈವರೆಗೆ ನಡೆದಿರುವ 8 ಪಂದ್ಯಗಳಲ್ಲಿ ಏಂಟರಲ್ಲೂ ಭಾರತವೇ ಗೆದ್ದಿದೆ. ಒಂದು ಬಾರಿಯೂ ಪಾಕ್ ಗೆ ಗೆಲುವಿನ ನಗು ಬೀರಲು ಸಾಧ್ಯವಾಗಿಲ್ಲ. ಆದ್ರೆ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಗೆ ಬಂದ್ರೆ ಇಲ್ಲಿ ಫಲಿತಾಂಶ 40:60 ಇದೆ.
ಈವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ 5 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡ 2 ಬಾರಿ ಗೆದ್ದಿದ್ದರೆ, 3 ಬಾರಿ ಪಾಕಿಸ್ತಾನದ್ದೇ ಮೇಲುಗೈ. ಅದರಲ್ಲೂ ಒಂದು ಬಾರಿ ಅಂತೂ ಫೈನಲ್ ನಲ್ಲೇ ಭಾರತ ತಂಡವನ್ನು ಸೋಲಿಸಿರುವ ಹೆಗ್ಗಳಿಕೆ ಪಾಕಿಸ್ತಾನದ್ದು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಚಾಲನೆ ಸಿಕ್ಕಿದ್ದು ಇಂದು ಉಭಯ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ ಎಂದು ಹೇಳಲಾಗಿದೆ.