ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 3 ದಿನಗಳ ಕಾಲ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ ಛತ್ತರ್ಪುರದಲ್ಲಿ ಬಾಗೇಶ್ವರ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿ, ಸೋಮವಾರ ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.
ಭೋಪಾಲ್ನಲ್ಲಿ ನಡೆಯಲಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಶೃಂಗಸಭೆ (GIS) ಮಧ್ಯಪ್ರದೇಶವನ್ನು ಜಾಗತಿಕ ಹೂಡಿಕೆ ಕೇಂದ್ರವಾಗಿ ಸ್ಥಾಪಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಇಲಾಖಾ ಶೃಂಗಸಭೆಗಳು, ಔಷಧ ಮತ್ತು ವೈದ್ಯಕೀಯ ಸಾಧನಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs) ಕುರಿತು ವಿಶೇಷ ಅಧಿವೇಶನಗಳನ್ನು ಒಳಗೊಂಡಿರುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂನ ಜುಮೋಯಿರ್ ಬಿನಂದಿನಿಯಲ್ಲೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಅಸ್ಸಾಂನಲ್ಲಿ ಚಹಾ ಉದ್ಯಮದ 200 ವರ್ಷಗಳ ಮತ್ತು ಕೈಗಾರಿಕೀಕರಣದ 200 ವರ್ಷಗಳ ಸಂಕೇತವಾಗಿದೆ. ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ನಾಯಕರು ಮತ್ತು ಹೂಡಿಕೆದಾರರು, ನೀತಿ ನಿರೂಪಕರು, ಉದ್ಯಮ ತಜ್ಞರು, ನವೋದ್ಯಮಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೋದಿ ಪ್ರವಾಸದ ಭೇಟಿ ಮತ್ತು ಕಾರ್ಯಕ್ರಮಗಳ ವಿವರ ಇಲ್ಲಿದೆ…!
ಮಧ್ಯಪ್ರದೇಶಕ್ಕೆ ಮೋದಿ ಭೇಟಿ : ಪ್ರಧಾನಿ ಮೋದಿ ಮೊದಲು ಮಧ್ಯಪ್ರದೇಶಕ್ಕೆ ಹೋಗಿ, ಅಲ್ಲಿಂದ ಭೋಪಾಲ್ನಲ್ಲಿ ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆ ಮತ್ತು ಜಾಗತಿಕ ಹೂಡಿಕೆದಾರರ ಶೃಂಗಸಭೆ 2025ಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. (ಫೆಬ್ರವರಿ 23) ಇಂದು ಅವರು ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಫೆಬ್ರವರಿ 24ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪ್ರಧಾನ ಮಂತ್ರಿ ಮೋದಿ ಭೋಪಾಲ್ನಲ್ಲಿ 2025ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. 60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು, ಭಾರತದ 300ಕ್ಕೂ ಹೆಚ್ಚು ಪ್ರಮುಖ ಕೈಗಾರಿಕಾ ಮುಖಂಡರು ಮತ್ತು ನೀತಿ ನಿರೂಪಕರು ಸೇರಿದಂತೆ ಇತರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿಹಾರಕ್ಕೆ ಮೋದಿ ಭೇಟಿ : ಫೆಬ್ರವರಿ 24ರಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದ ಭಾಗಲ್ಪುರಕ್ಕೆ ಪ್ರಯಾಣಿಸಲಿದ್ದು, ಮಧ್ಯಾಹ್ನ 2.15ರ ಸುಮಾರಿಗೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಅಸ್ಸಾಂಕ್ಕೆ ಮೋದಿ ಭೇಟಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಗುವಾಹಟಿಗೆ ಪ್ರಯಾಣ ಬೆಳೆಸಲಿದ್ದು, ಫೆಬ್ರವರಿ 24ರಂದು ಸಂಜೆ 6 ಗಂಟೆ ಸುಮಾರಿಗೆ ಜುಮೋಯಿರ್ ಬಿನಂದಿನಿ (ಮೆಗಾ ಜುಮೋಯಿರ್) 2025 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 25ರಂದು ಬೆಳಿಗ್ಗೆ 10.45ರ ಸುಮಾರಿಗೆ ಪ್ರಧಾನ ಮಂತ್ರಿ ಮೋದಿ ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ.