ಬೆಂಗಳೂರು : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಹ್ಯಾಟ್ರಿಕ್‌ ಸೋಲಾಗಿದೆ. ನಾಯಕಿ ಆಶ್ಲೇ ಗಾರ್ಡ್ನರ್ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ವಿರುದ್ಧ ಗುಜರಾತ್‌ ಜೈಂಟ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 125 ರನ್ ‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಹ್ಯಾಟ್ರಿಕ್‌ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.

32 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದರೂ ಗಾರ್ಡ್ನರ್ 58 ರನ್‌ (31 ಎಸೆತ, 6 ಬೌಂಡರಿ, 3 ಸಿಕ್ಸ್‌) ಸಿಡಿಸಿದರೆ ಫೋಬೆ ಲಿಚ್‌ಫೀಲ್ಡ್ ಔಟಾಗದೇ 30 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು. ಸ್ಮೃತಿ ಮಂಧನಾ 10 ರನ್‌, ಡ್ಯಾನಿ ವ್ಯಾಟ್‌ 4 ರನ್‌ ಗಳಿಸಿ ಔಟಾದರು. ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಪೆರ್ರಿ ಶೂನ್ಯಕ್ಕೆ ಔಟಾದರು. ರಾಘ್ವಿ ಬಿಸ್ಟ್‌ 22 ರನ್‌, ಕನಿಕಾ ಅಹುಜಾ 33 ರನ್‌, ಜಾರ್ಜಿಯಾ 20 ರನ್‌ ಕಲೆ ಹಾಕಿದರು.

ಗುಜರಾತ್‌ ಪರ ಉತ್ತಮ ಬೌಲಿಂಗ್‌ ಮಾಡಿದ ತನುಜಾ 16 ಹಾಗೂ ಡಿಯಾಂಡ್ರಾ 31 ರನ್‌ ನೀಡಿ ತಲಾ 2 ವಿಕೆಟ್‌ ಕಿತ್ತರು. ಇನ್ನುಳಿದ ಆಶ್ಲೀ, ಕಾಶ್ವೀ ತಲಾ ವಿಕೆಟ್‌ ಪಡೆದುಕೊಂಡರು.

Leave a Reply

Your email address will not be published. Required fields are marked *