ನವದೆಹಲಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮಹಾಕುಂಭ ಮೇಳದ ಬಗ್ಗೆ ಬ್ಲಾಗ್​ ನಲ್ಲಿ ಬರೆದಿದ್ದು, ಇಂದು ‘ಏಕತೆಯ ಮಹಾ ಯಜ್ಞ ಪೂರ್ಣಗೊಂಡಿದೆ’ ಎಂದು ಹೇಳಿದ್ದಾರೆ. ಹಾಗೇ, ಈ ಬೃಹತ್ ಧಾರ್ಮಿಕ ಆಚರಣೆಯ ಸಮಯದಲ್ಲಿ ಭಕ್ತರು ಯಾವುದಾದರೂ ತೊಂದರೆಗಳನ್ನು ಎದುರಿಸಿದ್ದರೆ, ಅದಕ್ಕೆ ಕ್ಷಮೆ ಕೋರುತ್ತೇನೆ ಎಂದು ಮೋದಿ ಹೇಳಿದ್ದಾರೆ.

“ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕತೆಯ ಮಹಾ ಕುಂಭದಲ್ಲಿ 140 ಕೋಟಿ ದೇಶವಾಸಿಗಳ ನಂಬಿಕೆ 45 ದಿನಗಳ ಕಾಲ ಒಗ್ಗೂಡಿದ್ದರಿಂದ ಈ ಉತ್ಸವ ಅದ್ಭುತವಾಗಿ ಪೂರ್ಣಗೊಂಡಿದೆ. ಮಹಾ ಕುಂಭಮೇಳ ಮುಗಿದ ನಂತರ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ” ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

“ಒಂದು ರಾಷ್ಟ್ರದ ಪ್ರಜ್ಞೆ ಜಾಗೃತಗೊಂಡಾಗ, ಅದು ನೂರಾರು ವರ್ಷಗಳ ಗುಲಾಮಗಿರಿಯ ಮನಸ್ಥಿತಿಯ ಎಲ್ಲಾ ಸಂಕೋಲೆಗಳನ್ನು ಮುರಿದು ಹೊಸ ಪ್ರಜ್ಞೆಯೊಂದಿಗೆ ಗಾಳಿಯಲ್ಲಿ ಉಸಿರಾಡಲು ಪ್ರಾರಂಭಿಸಿದಾಗ, ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕತೆಯ ಮಹಾ ಕುಂಭದಲ್ಲಿ ನಾವು ನೋಡಿದಂತೆ ಇದೇ ರೀತಿಯ ದೃಶ್ಯ ಕಾಣಿಸಿಕೊಳ್ಳುತ್ತದೆ” ಎಂದರು.

ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಯ ತ್ರಿವೇಣಿ ಸಂಗಮದ ನೀರಿನ ಮೇಲೆ ಅದ್ಭುತವಾದ ಪಟಾಕಿ ಪ್ರದರ್ಶನದ ಮೂಲಕ ಮಹಾಕುಂಭ ಅಂತ್ಯಗೊಂಡಿತು. ಮಹಾಕುಂಭದ ಕೊನೆಯ ದಿನದಂದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದರು.

ಹಬ್ಬದ ಸಮಯದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ 66.21 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನದಲ್ಲಿ ಭಾಗವಹಿಸಿದ್ದರು. ಜನವರಿ 13ರಿಂದ ಫೆಬ್ರವರಿ 26ರವರೆಗೆ ರಾಜಕಾರಣಿಗಳು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ದೇಶಾದ್ಯಂತ ಮತ್ತು ಅದರಾಚೆಗಿನ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *