ಸಾವಿರ ಜನ ವಿರೋಧ ಮಾಡಲಿ. ಇದು ನನ್ನ ನಂಬಿಕೆ ವಿಚಾರವಾಗಿದ್ದು, ಯಾರ್ಯಾರೋ ಟ್ವೀಟ್ ಮಾಡುತ್ತಾರೆ. ಅವರಿಗೆಲ್ಲ ನಾನು ಉತ್ತರ ನೀಡಲು ಹೋಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಸಮರ್ಥಿಸಿಕೊಂಡ ಅವರು, ದೊಡ್ಡನಾಯಕರ ಮಾತಿಗೆ ನಾನು ಉತ್ತರ ನೀಡುವುದಿಲ್ಲ. ನಾನು ಹೋಗಿದ್ದು ಶಿವನರಾತ್ರಿಗೆ. ಇದು ನನ್ನ ಸ್ವಂತ ನಂಬಿಕೆ ಎಂದು ಎಐಸಿಸಿ ಕಾರ್ಯದರ್ಶಿ ಪಿವಿ ಮೋಹನ್ಗೆ ಠಕ್ಕರ್ ನೀಡಿದರು.
ಯಾವ ಬಿಜೆಪಿಯ ಸ್ವಾಗತ ಬೇಡ, ಕಾಂಗ್ರೆಸ್ ಅವರು ಸ್ವಾಗತ ಮಾಡುವುದು ಬೇಡ. ಮಾಧ್ಯಮಗಳು ಮಾತನಾಡುವ ಅವಶ್ಯಕತೆ ಇಲ್ಲ. ಇದು ನನ್ನ ವೈಯಕ್ತಿಕ ನಂಬಿಕೆ ಹೋಗಿದ್ದೇನೆ ಎಂದರು. ರಾಹುಲ್ ಗಾಂಧಿ ಅವರನ್ನು ಸದ್ಗುರು ವಿರೋಧ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಏನು ಕಾಮೆಂಟ್ ಮಾಡಿದ್ದಾರೆ ನಾನು ನೋಡಿಲ್ಲ. ನನಗೆ ಸದ್ಗುರು ನಮ್ಮ ರಾಜ್ಯದವರು, ಮೈಸೂರಿನವರು. ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದ್ದರು.
ಸೇವ್ ಸಾಯಲ್ ಅಂತ ಅಭಿಯಾನ ಮಾಡಿದ್ದರು. ನಮ್ಮ ರಾಜ್ಯದಲ್ಲಿ ಅವರ ಫೌಂಡೇಶನ್ನಿಂದ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರೇ ಖುದ್ದು ಬಂದು ಕರೆದಿದ್ದಕ್ಕೆ ಹೋಗಿದ್ದೇನೆ. ನಾನು ಅವರ ಅಚಾರ, ವಿಚಾರ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿದರು. ಹಿಂದು ಆಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿಯೇ ಸಾಯುತ್ತೇನೆ ಎಂಬ ಮಾತಿಗೆ ಬಿಜೆಪಿ ಸ್ವಾಗತ ಮಾಡಿದ್ದಕ್ಕೆ, ನಾನು ಯಾಕೆ ಬೇರೆ ಧರ್ಮಕ್ಕೆ ಹೋಗಲಿ? ನನಗೆ ಎಲ್ಲಾ ಧರ್ಮದ ಮೇಲೆ ಪ್ರೀತಿ ನಂಬಿಕೆ ಇದೆ.
ಮಾನವ ಧರ್ಮಕ್ಕೆ ಜಯವಾಗಲಿ. ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಯಾರು ಅರ್ಜಿ ಹಾಕಿಕೊಂಡಿಲ್ಲ. ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ ಬೌದ್ದ ಧರ್ಮಕ್ಕೆ ಸೇರಿಕೊಂಡರು. ಅದು ಅವರ ಇಷ್ಟ. ರಾಜಕೀಯಕ್ಕೆ ಬಳಕೆ ಮಾಡುವುದಾದರೆ ಮಾಡಿಕೊಳ್ಳಲಿ. ನಮ್ಮ ಬಗ್ಗೆ ಚರ್ಚೆ ಆಗುತ್ತನೇ ಇರಲಿ ಎಂದರು.
ಕುಂಭಮೇಳಕ್ಕೂ ರಾಜಕೀಯಕ್ಕೂ ಏನ್ ಸಂಬಂಧ? ನೀರು, ಗಾಳಿಗೆ ಜಾತಿ ಇದೆಯಾ? ಅಲ್ಲೂ 3 ನದಿ ಸೇರುತ್ತದೆ. ಟಿ ನರಸಿಪುರದಲ್ಲೂ 3 ನದಿ ಸೇರುತ್ತದೆ. ಅದು ಕಮ್ಯೂನಲ್ ವಿಷಯ ಅಲ್ಲ. ಮೊದಲಿಂದಲೂ ಅದೊಂದು ಪದ್ದತಿ ಧರ್ಮದಲ್ಲಿ ನಡೆದುಕೊಂಡು ಬಂದಿದೆ. ಅಷ್ಟು ಬಿಟ್ಟರೆ ಅದರಲ್ಲಿ ಯಾವುದೇ ರಾಜಕೀಯ ಇಲ್ಲ. ಸ್ಪೀಕರ್ ಕೂಡಾ ಕುಂಭಮೇಳೆಕ್ಕೆ ಬಂದಿದ್ದರು. ಅವರೇ ಹೋಗಬೇಕು ಅಂತ ಹೇಳಿದ್ದರು. ಕುಂಭಮೇಳದಲ್ಲಿ ಹೇಗೆ ವ್ಯವಸ್ಥೆ ಅಂತ ನೋಡಿಕೊಂಡು ಬಂದಿದ್ದೇನೆ ಅಷ್ಟೇ. ಕಾವೇರಿ ಆರತಿ ಬಗ್ಗೆಯೂ ಮಾತಾಡಿದ್ದೇನೆ. ಅದಕ್ಕೆ ರಾಜಕೀಯ ಬೆಳೆಸಬೇಡಿ ಎಂದು ಹೇಳಿದರು.