ಬೀದರ್ : ಜಿಲ್ಲೆಯಲ್ಲಿ ಮಾರ್ಚ್2 ರಿಂದ 4ರವರೆಗೆ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಜರುಗಲಿದ್ದು, ರಾಜ್ಯದ 31 ಜಿಲ್ಲೆಗಳ 1,500ಕ್ಕೂ ಅಧಿಕ ಪಾರಂಪರಿಕ ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವು ಶ್ರೀಮಂತ ಜೀವವೈವಿಧ್ಯ ತಾಣವಾಗಿದೆ. ಅನೇಕ ಪ್ರಬೇಧಗಳ ಸಸ್ಯ, ಪ್ರಾಣಿ, ಕೀಟ ಸಂಕುಲಗಳನ್ನ ಹೊಂದಿದೆ. ಮನುಷ್ಯನ ಹಾಗೆ ಇವೆಲ್ಲದಕ್ಕೂ ಬದುಕುವ ಹಕ್ಕಿದ್ದು, ಇವುಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕಾಗಿದೆ.
ಮುಂದಿನ ಪೀಳಿಗೆಗೆ ಇವುಗಳನ್ನ ಪರಿಚಯಿಸುವ ಅವಶ್ಯಕತೆ ಇದೆ. ಇನ್ನೂ ಋಷಿ ಮುನಿಗಳು, ಹಿರಿಯರು ಎಲ್ಲಾ ರೋಗಗಳಿಗೆ ಗಿಡಮೂಲಿಕೆ, ಪ್ರಕೃತಿ ಚಿಕಿತ್ಸೆಯಿತ್ತು. ಔಷಧಿಯ ಗುಣಧರ್ಮ ಇಲ್ಲದ ಸಸಿಗಳು ಭೂಮಿ ಮೇಲೆ ಎಲ್ಲಿಯೂ ಇಲ್ಲ ಎಂದು ಹೇಳಿದರು.
ಔಷಧೀಯ ಸಸ್ಯಗಳನ್ನು ಪತ್ತೆ ಹಚ್ಚುವ, ಔಷಧಿ ತಯಾರಿಕೆಯ ಮಾಹಿತಿ ಕಡಿಮೆ ಆಗುತ್ತಿದೆ. ಔಷಧಿಯ ಸಸ್ಯಗಳನ್ನ ಪತ್ತೆ ಹಚ್ಚುವವರಿಲ್ಲದೇ ನಶಿಸಿ ಹೋಗುತ್ತಿವೆ. ಪಾರಂಪರಿಕ ವೈದ್ಯ ಪದ್ಧತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನ ಒಟ್ಟು ಮೂರು ದಿನ ನಡೆಯಲಿದ್ದು, 11 ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.