ನವದೆಹಲಿ : ಆಪ್ ನಾಯಕ ಅವಧ್ ಓಜಾ ಅವರ ಕಾರಿನ ನಾಲ್ಕು ಚಕ್ರಗಳನ್ನು ಕಳ್ಳರು ಕದ್ದೋಯ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಚಕ್ರಗಳಿಲ್ಲದೆ ನಿಂತಿರುವ ಓಜಾ ಅವರ ಕಾರಿನ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
ದೆಹಲಿಯ ಪತ್ಪರ್ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವಧ್ ಓಜಾ, ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ಚಕ್ರಗಳನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ. ಅತಿ ಹೆಚ್ಚು ಜನ ಓಡಾಡುವ ಪ್ರದೇಶದಲ್ಲಿ ಇಂತಹ ಕೃತ್ಯ ಹೇಗೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪತ್ಪರ್ಗಂಜ್ ಕ್ಷೇತ್ರದಿಂದ ಓಜಾ ಅವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅವರು ಬಿಜೆಪಿಯ ರವೀಂದರ್ ಸಿಂಗ್ ನೇಗಿ ವಿರುದ್ಧ ಸೋತಿದ್ದರು. ಸೋಲಿನ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.